ಕಾಡಿನಿಂದ ನಾಡಿಗೆ ಬಂದು ಗುಂಡ್ಲುಪೇಟೆ ತಾಲೂಕಿನ ಚಿರಕನಹಳ್ಳಿ ಬಳಿ ಬೋನಿಗೆ ಬಿದ್ದ ಹುಲಿ 
ಚಾಮರಾಜನಗರ

ದಾರಿ ತಪ್ಪಿದ ಹುಲಿ..!

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ವ್ಯಾಘ್ರಗಣದ ಏರಿಕೆಯೂ, ಪರಿಸರ ಧಾರಣೆ ಸಾಮರ್ಥ್ಯ ಇಳಿಕೆಯೂ..
  • ಅಡವಿಯಿಂದ ಹೊರಬಂದು ಅಡಿಗಡಿಗೂ ಸಮಸ್ಯೆ ಎದುರಿಸುತ್ತಿರುವ ಶಾರ್ದೂಲ
  • ಕಾಡು ಬಿಡುವಂತೆ ಮಾಡಲು ಕಾರಣಗಳೇನು..?
ಚಾಮರಾಜನಗರ: ಕಾಡಿನೊಳಗೆ ಮೊಳಗಬೇಕಾದ ಹೆಜ್ಜೆ ಸಪ್ಪಳ ನಾಡಿನಲ್ಲಿ ಮೊರೆಯುತ್ತಿದೆ. ಗವಿಯ ಅಂಗಳದಲ್ಲಿ ಪ್ರತಿಧ್ವನಿಸಬೇಕಾದ ಗರ್ಜನೆ ಊರಂಚಿನ ಜಮೀನುಗಳಲ್ಲಿ ಬೋರ್ಗರೆಯುತ್ತಿದೆ. ರಣ ಬೇಟೆಗಾಗಿ ದಟ್ಟಡವಿಯಲ್ಲಿ ಹಿಡಿಯಬೇಕಾದ ಜಾಡು ತೋಟದ ಮನೆಯ ಕೊಟ್ಟಿಗೆಗೆ ಬಂದು ನಿಲ್ಲುತ್ತಿದೆ ಎಂದರೆ, ಇದರರ್ಥ ಹುಲಿಯು ದಾರಿ ತಪ್ಪಿದೆ..!
ಜು.29ರ ‘ವಿಶ್ವ ಹುಲಿಗಳ ದಿನ’ದಂದು ಹುಲಿಯು ದಾರಿ ತಪ್ಪಲು ಕಾರಣವೇನು ಮತ್ತು ಕಾರಣ ಯಾರು ಎನ್ನುವ ಪ್ರಶ್ನೆ ಎದ್ದಿದೆ. ಏಕೆಂದರೆ, ಕಳೆದ ವರ್ಷದ ವಿಶ್ವ ಹುಲಿಗಳ ದಿನಾಚರಣೆಯ ಸಂಭ್ರಮವನ್ನು ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ನಡೆದ 5 ವ್ಯಾಘ್ರಗಳ ಪ್ರತೀಕಾರದ ಹತ್ಯೆ ನುಂಗಿಹಾಕಿತು. ಈ ಕರಾಳ ನೆನಪು ಮಾಸುವ ಮುನ್ನವೇ ಈ ವರ್ಷ ಎದುರುಗೊಂಡಿರುವ ವಿಶ್ವ ಹುಲಿ ಆಚರಣೆಯ ಹೊತ್ತಿನಲ್ಲಿ ಕಾಡಿನಿಂದ ನಾಡಿಗೆ ದಾರಿ ತಪ್ಪಿ ಬರುತ್ತಿರುವ ಹುಲಿಗಳ ಕುರಿತು ಕಳವಳಿ ಮತ್ತು ಇವುಗಳ ಸಂರಕ್ಷಣೆಯ ಮೇಲಿರುವ ಕಳಕಳಿಯ ಚರ್ಚೆ ತಾರಕಕ್ಕೇರಿದೆ.
ಕರ್ನಾಟಕದಲ್ಲಿ ಉತ್ತಮ ಸಂರಕ್ಷಣೆಯಿಂದಾಗಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. ಆದರೆ ಇದಕ್ಕೆ ತಕ್ಕಂತೆ ಪರಿಸರ ಧಾರಣೆ ಸಾಮರ್ಥ್ಯವೂ ವೃದ್ಧಿಯಾಗದೆ ವ್ಯಾಘ್ರಗಳು ಉಳಿಯಲು ಜಾಗ ಸಿಗುತ್ತಿಲ್ಲ. ರಾಜ್ಯದಲ್ಲಿ ಒಟ್ಟು 1,20,491 ಪ್ರಕರಣಗಳಲ್ಲಿ 2,21,263 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. 2014ನೇ ಸಾಲಿನಿಂದ 8424 ಪ್ರಕರಣಗಳಲ್ಲಿ 35098.40 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಈ ಹಿಂದೆ ಅರಣ್ಯ ಇಲಾಖೆ ತಿಳಿಸಿತ್ತು.
ಈ ಒತ್ತುವರಿ ಭೂತ ಹುಲಿಗಳ ಆವಾಸ ಸ್ಥಳಗಳನ್ನು ಕಸಿಯುತ್ತಿದೆ. ಕಾಡು ಬಿಟ್ಟು ನಾಡು ಸೇರಲು ಇಚ್ಛಿಸುತ್ತಿರುವವರಿಗೆ ಪುನರ್ವಸತಿ ಕಲ್ಪಿಸಲು ಮೀನಾಮೇಷ ಎಣಿಸಲಾಗುತ್ತಿದೆ. ಇದರಿಂದಾಗಿ ಜನವಸತಿ ಪ್ರದೇಶ ಕಾಡಾಗಲು ಅಡ್ಡಿಯಾಗುತ್ತಿದೆ.
ಅರಣ್ಯದಂಚಿನ ಗಡಿ ಗುರುತು, ಪ್ರಾಣಿಗಳು ನಾಡಿಗೆ ಬರುವುದನ್ನು ತಪ್ಪಿಸುವ ಕ್ರಮಗಳು ನಶಿಸಿಹೋಗಿವೆ. ಕಾಡಿನ ಪಕ್ಕದಲ್ಲಿ ಬೀಳುಬಿದ್ದ ಜಮೀನುಗಳಲ್ಲಿ ದಟ್ಟವಾಗಿ ಬೆಳೆದ ಗಿಡಗಂಟಿಗಳು ಹುಲಿಗಳ ವಾಸಕ್ಕೆ ಯೋಗ್ಯವಾಗುತ್ತಿವೆ. ಮೊದಲೆಲ್ಲ ಗಾಯಗೊಂಡಿದ್ದ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿದ್ದವು. ಆದರೆ ಈಗ ಮರಿಗಳೊಂದಿಗೆ ತಾಯಿ ಹುಲಿ ಹೊರಬರುತ್ತಿವೆ.
ವ್ಯಾಘ್ರ ಸೆರೆ-ನಿತ್ಯ ಕರೆ:
ರಾಜ್ಯದಲ್ಲಿ ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಭದ್ರ, ಕಾಳಿ ಒಟ್ಟು 5 ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಿವೆ. ಇವುಗಳಲ್ಲಿ ಮೂರು ಅಭಯಾರಣ್ಯಗಳು ಮೈಸೂರು ಭಾಗದಲ್ಲೇ ಇವೆ. 2022 ಅಖಿಲ ಭಾರತ ಹುಲಿ ಗಣತಿ ಪ್ರಕಾರ, ದೇಶದಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 563 ಹುಲಿಗಳಿದ್ದು, ಮೈಸೂರು ಭಾಗದ ಬಂಡೀಪುರದಲ್ಲಿ 150, ನಾಗರಹೊಳೆಯಲ್ಲಿ 141, ಬಿಆರ್‌ಟಿಯಲ್ಲಿ 44 ಹುಲಿಗಳು ಲೆಕ್ಕಕ್ಕೆ ಸಿಕ್ಕಿದ್ದವು. ಪ್ರಸ್ತುತ ವರ್ಷದಲ್ಲಿ ಹುಲಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವುದನ್ನು ಸಹಜವಾಗಿಯೇ ಅಂದಾಜಿಸಬಹುದು. ಪ್ರತಿದಿನ ಒಂದಿಲ್ಲೊಂದು ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡ ಆತಂಕ ಸೃಷ್ಟಿಸುತ್ತಿರುವುದೂ ಕಾಣುತ್ತಿದೆ. ಹುಲಿಗಳ ಸೆರೆಗಾಗಿ ಸಾರ್ವಜನಿಕರಿಂದ ನಿತ್ಯವೂ ಕರೆಗಳು ಬರುತ್ತಿವೆ.
ರೈತರು, ಕಾರ್ಯಾಚರಣೆ ಮಾಡುತ್ತಿದ್ದ ಅರಣ್ಯ ಸಿಬ್ಬಂದಿ, ಜಾನುವಾರುಗಳ ಮೇಲೆ ಹುಲಿ ದಾಳಿ ನಡೆದಿವೆ. ಸೆರೆ ಹಿಡಿದ ಹುಲಿಗಳನ್ನು ಸ್ಥಳಾಂತರ ಮಾಡುತ್ತಿದೆ. ಬಂಡೀಪುರ, ನಾಗರಹೊಳೆ, ಬಿಆರ್‌ಟಿ ವ್ಯಾಪ್ತಿಯಲ್ಲಿ 4 ತಿಂಗಳಲ್ಲಿ 25 ಹುಲಿಗಳನ್ನು ಸೆರೆ ಹಿಡಿದಿರುವುದಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಜ.27ರಂದು ರಾಜ್ಯ ಸರ್ಕಾರಕ್ಕೆ ವಿವರಣೆ ಕೇಳಿತ್ತು.
ಬಿಆರ್‌ಟಿ ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡುತ್ತಿದ್ದ 6 ಹುಲಿಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದೆ. ಇಂತಹ ಸಂದರ್ಭದಲ್ಲಿ ತಾಯಿ ಹುಲಿ, ಮರಿಗಳು ಬೇರ್ಪಡುತ್ತಿರುವುದು ಕರುಣಾಜನಕವಾಗಿದೆ. ಹುಲಿ ಕುಟುಂಬದಲ್ಲಿ ಮರಿಗಳಿಗೆ ತಾಯೇ ಮೊದಲ ಗುರು. ಸುಮಾರು 100 ದಿನಗಳವರೆಗೆ ಗರ್ಭದಲ್ಲಿ ಕಾಪಿಟ್ಟು, 2 ವರ್ಷಗಳವರೆಗೆ ಪಾಲನೆ ಮಾಡಿ, ಬೇಟೆ ಕಲಿಸುವ ತಾಯಿ ಹುಲಿ ತನ್ನ ಮರಿಗಳೊಂದಿಗೆ ನಾಡಿನತ್ತ ಬಂದು ಬೋನಿಗೆ ಸಿಲುಕುತ್ತಿದೆ. ಮರಿ ಹುಲಿಗಳು ಅಮ್ಮನನ್ನು ಹುಡುಕುವ ತಬ್ಬಲಿಗಳಾಗುತ್ತಿವೆ.
ಸಂಘರ್ಷ ಸವಾರಿ, ಮಸ್ತಾದ ಸಾರಿ:
ಪ್ರಸ್ತುತ ಹುಲಿಗಳ ಬದುಕು ಸಂಘರ್ಷದೊಳಗೆ ಸವಾರಿ, ಮಸ್ತಾದ ಸಾರಿಯೊಳಗೆ ಬಂಧಿಯಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಮಾನವ-ಹುಲಿ ಸಂಘರ್ಷ ನಡೆಯುತ್ತಿದೆ. ಇದರಿಂದ ಆಗುತ್ತಿರುವ ಹಾನಿ ಸ್ಥಳೀಯರ ಜೀವನಮಟ್ಟವನ್ನು ಕುಗ್ಗಿಸುತ್ತಿದೆ. ಹುಲಿ ಭಯಕ್ಕೆ ರೈತರು ವ್ಯವಸಾಯವನ್ನೇ ಬಿಟ್ಟಿರುವ ಉದಾಹರಣೆಗಳಿವೆ. ಮತ್ತೊಂದೆಡೆ ಪರಿಸರ ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಿರುವ ಹುಲಿ ಅರಣ್ಯ ಇಲಾಖೆಗೆ ಸಾರಿ ಮೂಲಕ ದೊಡ್ಡಮಟ್ಟದ ಆದಾಯ ತಂದುಕೊಡುತ್ತಿದೆ.
ಈ ಸಂಪನ್ಮೂಲವನ್ನು ಸ್ಥಳೀಯರ ಜೀವನೋಪಾಯಕ್ಕೆ ಪರಿಣಾಮಕಾರಿಯಾಗಿ ವಿನಿಯೋಗಿಸಿದರೆ ಹುಲಿ ಕಾಟದ ನಷ್ಟವನ್ನು ಜನರು ಸರಿದೂಗಿಸಿಕೊಳ್ಳುತ್ತಾರೆ. ಪ್ರಧಾನ ಮಂತ್ರಿ ನರೇಂದ್ರಮೋದಿ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯಪ್ರದೇಶದಲ್ಲಿ ಹುಲಿ ಮತ್ತು ಸೋಲಿಗರು ಸಹಬಾಳ್ವೆಯಿಂದ ಜೀವಿಸುತ್ತಿರುವುದರನ್ನು ಮನ್ ಕಿ ಬಾತ್‌ನಲ್ಲಿ ಉಲ್ಲೇಖಿಸಿದ್ದರು. ಈ ರೀತಿ ಬೇರೆ ಕಾಡುಗಳಲ್ಲೂ ಸಂಘರ್ಷ ರಹಿತ ಜೀವನ ಶುರುವಾದರೆ ವ್ಯಾಘ್ರಗಳ ಸಂರಕ್ಷಣೆಗೆ ಸ್ಥಳೀಯರ ಬೆಂಬಲ ದೊಡ್ಡ ಶಕ್ತಿಯಾಗಿದೆ.
6ನೇ ರಾಷ್ಟ್ರೀಯ ಹುಲಿ ಗಣತಿ:
2022ರ ಅಖಿಲ ಭಾರತ ಹುಲಿ ಗಣತಿ ಪ್ರಕಾರ ದೇಶದಲ್ಲಿ ಮಧ್ಯಪ್ರದೇಶ ಪ್ರಥಮ, ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. 4 ವರ್ಷಗಳಿಗೆ ಒಮ್ಮೆ ನಡೆಯುವ ಹುಲಿ ಗಣತಿಯಲ್ಲಿ 2006ರಲ್ಲಿ 290, 2010ರಲ್ಲಿ 300, 2014ರಲ್ಲಿ 406, 2018ರಲ್ಲಿ 524, 2022ರಲ್ಲಿ 563 ಹುಲಿಗಳು ಗಣತಿಗೆ ಸಿಕ್ಕಿವೆ. ಈ ವರ್ಷ 6ನೇ ರಾಷ್ಟ್ರೀಯ ಹುಲಿ ಗಣತಿ ಜನವರಿಯಿಂದ ಮಾರ್ಚ್‌ವರೆಗೆ ನಡೆದಿದೆ. ಬಂಡೀಪುರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಈ ವರ್ಷ ‘ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಬೆಕ್ಕು ಮೈತ್ರಿ ಶೃಂಗಸಭೆ’ ನಡೆದಿತ್ತು. ಒಟ್ಟು 23 ದೇಶಗಳು ಪಾಲ್ಗೊಂಡಿದ್ದವು. ಕಳೆದ ವರ್ಷ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಆರು ಹುಲಿಗಳನ್ನು ಪ್ರತೀಕಾರಕ್ಕಾಗಿ ಹತ್ಯೆ ಮಾಡಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಕೃತ್ಯದ ನಂತರವೂ ಮೇಕೆ ಕಳೇಬರಕ್ಕೆ ವಿಷ ಹಾಕಿ ಚಿರತೆ ಸಾಯಿಸಿದ್ದ ಪ್ರಕರಣದ ನಡೆಯಿತು.
ವಿಶ್ವ ಹುಲಿ ದಿನಾಚರಣೆ: ಆಹಾರ ಸರಪಳಿಯಲ್ಲಿ ಅಗ್ರಸ್ಥಾನದಲ್ಲಿರುವ ಹುಲಿಗಳ ಸಂರಕ್ಷಣೆಗಾಗಿ 2010ರ ಜು.29ರಂದು ಸೆಂಟ್ ಪೀಟರ್ ಬರ್ಗ್‌ನಲ್ಲಿ ವಿಶ್ವ ಹುಲಿ ದಿನವನ್ನು ಆಚರಣೆ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ಜು.29ರಂದು ವ್ಯಾಘ್ರಕ್ಕೂ ಒಂದು ದಿನ ಮೀಸಲಾಗಿದೆ.
ಹುಲಿಗಳ ಸಂರಕ್ಷಣೆಯನ್ನು ಉತ್ತಮವಾಗಿ ಮಾಡುತ್ತಿರುವುದರಿಂದ ಸಹಜವಾಗಿಯೇ ಸಂತತಿ ಹೆಚ್ಚಳವಾಗಿದೆ. ವ್ಯಾಘ್ರಗಳು ಕಾಡಿನಿಂದ ನಾಡಿಗೆ ಬರಲು ಹಲವು ದೃಷ್ಟಿಕೋನಗಳಿವೆ. ಚಲನಾ ಜೀವಿಯಾಗಿರುವ ಕಾರಣಕ್ಕೆ ಕೃಷಿ ಮಾಡದೆ ಬೀಳುಬಿದ್ದ ಭೂಮಿ, ಗಿಡಗಂಟಿ ಬೆಳೆದ ಜಮೀನುಗಳು ಕಾಣಿಸಿಕೊಳ್ಳುತ್ತವೆ.
ಶ್ರೀಪತಿ, ನಿರ್ದೇಶಕ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಚಾಮರಾಜನಗರ
ಅರಣ್ಯದೊಳಗೆ ಅನವಶ್ಯಕವಾಗಿ ಆವಾಸಸ್ಥಳಗಳನ್ನು ಮಾರ್ಪಾಡು ಮಾಡುವುದು, ಸಹಜವಾಗಿ ಸಾಯುತ್ತಿರುವ ವನ್ಯಜೀವಿಗಳನ್ನು ರಕ್ಷಣೆ ಮಾಡುವುದು, ಸಾಕಿರುವ ಹುಲಿಗಳನ್ನು ಕಾಡಿಗೆ ತಂದು ಬಿಡುವ ಇತ್ಯಾದಿ ಅನೈಸರ್ಗಿಕ ಕ್ರಮಗಳಿಂದಾಗಿ ಹುಲಿಗಳ ಸಂಖ್ಯೆ ಹೆಚ್ಚಾಗಿ ಅವು ಕಾಡಿನಿಂದ ನಾಡಿಗೆ ಬರಲು ಕಾರಣವಾಗುತ್ತಿದೆ.
ಡಾ.ಕೆ.ಉಲ್ಲಾಸ ಕಾರಂತ, ವನ್ಯಜೀವಿ ತಜ್ಞ