ಉರುಳಿಗೆ ಸಿಲುಕಿ ಮೃತಪಟ್ಟ ಹುಲಿ
- ಇಂದು ಉರುಳಿಗೆ ಸಿಲುಕಿ ಉಸಿರು ಚೆಲ್ಲಿದ ಹುಲಿ
- ಬೇಟೆಗಾರರ ಹೆಡೆಮುರಿ ಕಟ್ಟದಿದ್ದರೆ ವನ್ಯಜೀವಿಗಳ ಜೀವಕ್ಕೆ ಅಪಾಯ
ಚಾಮರಾಜನಗರ: ಜಿಲ್ಲೆಯ ಎರಡು ಪ್ರಮುಖ ಕಾಡುಗಳಲ್ಲಿ ಬೇಟೆಗಾರಿಕೆ ಸದ್ದಿಲ್ಲದೆ ಸಕ್ರಿಯವಾಗಿ ಚಟುವಟಿಕೆ ನಡೆಸಲು ಪ್ರಯತ್ನ ನಡೆಸುತ್ತಿವೆ.
ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಜಿಲ್ಲೆ ಚಾಮರಾಜನಗರ. ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿಯಾಗಿರುವ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಿರುವ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ನಡೆದಿರುವ ಪ್ರಮುಖ ಘಟನಾವಳಿಗಳು ಬೇಟೆಗಾರಿಕೆ ಸಕ್ರಿಯವಾಗಿರಬಹುದೆಂಬ ಅನುಮಾನಗಳಿಗೆ ಪುಷ್ಟಿ ನೀಡಿವೆ.
ವಿಷ ಮತ್ತು ಉರುಳು: ಮಲೆ ಮಹದೇಶ್ವರ ವನ್ಯಜೀವಿಧಾಮವಿರುವ ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ 6 ದನಗಳು ಹಾಗೂ ಗುನ್ನೂರು ಬಯಲು ಪಳನಿಮೇಡು ಗ್ರಾಮದ 5 ದನಗಳು ಮೇವು ಮೇಯಲು ಹೋಗಿದ್ದಾಗ ನೀರು ಕುಡಿದು ಮರಣಹೊಂದಿದವು. ದನಗಳ ಮರೋಣೋತ್ತರ ಪರೀಕ್ಷೆಯಲ್ಲಿ ವಿಷಯುಕ್ತ ನೀರು ಸೇವಿಸಿರುವುದರಿಂದ ಜಾನುವಾರುಗಳು ಮರಣ ಹೊಂದಿರುತ್ತದೆ ಎಂದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿತು. ಈ ರೀತಿ ನೀರಿಗೆ ವಿಷ ಹಾಕಿರುವ ಉದ್ದೇಶದ ಹಿಂದೆ ವನ್ಯಜೀವಿಗಳ ಬೇಟೆಗಾರಿಕೆ ಅಡಗಿದೆ. ಕಾಡುಪ್ರಾಣಿಗಳು ವಿಷಯುಕ್ತ ನೀರು ಕುಡಿದ ಸಾಯುವ ಬದಲು ಅರಣ್ಯಕ್ಕೆ ಮೇವು ಮೇಯಲು ಹೋಗಿದ್ದ ಹಸು ಮತ್ತು ದನಗಳು ಮೃತಪಟ್ಟಿವೆಯಷ್ಟೆ. ಈ ಪ್ರಕರಣದಲ್ಲಿ ನೀರಿಗೆ ವಿಷ ಹಾಕಿದ್ದ ಆರೋಪಿ ಪತ್ತೆಗಾಗಿ ರಾಮಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಭಾನುವಾರ ಬೆಳಕಿಗೆ ಬಂದ ಹುಲಿ ಸಾವಿನ ಪ್ರಕರಣದಲ್ಲೂ ಬೇಟೆಗಾರಿಕೆಯ ಕರಾಳಮುಖವಾಡ ಬಹಿರಂಗಗೊಂಡಿದೆ. ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ 5-6 ವರ್ಷದ ಗಂಡು ಹುಲಿ ನೀರಿನಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಮೇಲ್ನೋಟಕ್ಕೆ ಉರುಳಿಗೆ ಸಿಲುಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬೇಟೆಗಾರರ ಜಾಲ ಸಕ್ರಿಯವಾಗಿ ಇರದಿದ್ದರೆ ಉರುಳು ಕಾಡಿನೊಳಗೆ ಬರಲು ಹೇಗೆ ಸಾಧ್ಯ?, ಸಾಮಾನ್ಯವಾಗಿ ಹುಲಿಗಳ ಬೇಟೆಗಾಗಿ ಉರುಳು ಬಳಕೆ ಮಾಡಲಾಗುತ್ತದೆ. ಬೇಟೆಗಾರರ ಬೇಟೆ ಹುಲಿಯೇ ಆಗಿತ್ತೇ?, ಇಂತಹ ಕೃತ್ಯ ಎಸಗಲು ತಂಡವಿದೆಯೇ?, ದಟ್ಟ ಅರಣ್ಯದಲ್ಲಿ ಗಸ್ತು ನಡೆಸುವ ಸಿಬ್ಬಂದಿ ಉರುಳನ್ನು ಮೊದಲೇ ಪತ್ತೆ ಹಚ್ಚಲು ಸಾಧ್ಯವಾದೆ ಇರಬಹುದು. ಆದರೆ ಇದಕ್ಕೂ ಮೊದಲೇ ಉರುಳು ಇಡಲು ಬಂದ ಬೇಟೆಗಾರರ ಚಲನವಲನವನ್ನು ಕಂಡುಹಿಡಿಯಬೇಕಿತ್ತಲೇ ಎನ್ನವ ಅನುಮಾನಗಳು ಮೂಡಿದ್ದು, ಅರಣ್ಯ ಇಲಾಖೆಯ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.
ಜಿಲ್ಲೆಯ ಅರಣ್ಯಪ್ರದೇಶಗಳಲ್ಲಿ ಹುಲಿಗಳ ಅಸ್ವಾಭಾವಿಕ ಸಾವು ಕಳವಳ ಹುಟ್ಟುಹಾಕುತ್ತಿದೆ. ಹುಲಿಗಳ ನಾಡಿನಲ್ಲಿ ವ್ಯಾಘ್ರಗಳು ಸಾವಿನ ಸುದ್ದಿಗಳಿಂದಲೇ ಸದ್ದು ಮಾಡುತ್ತಿವೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವಿಷ ಪ್ರಾಶನದಿಂದ ತಾಯಿ ಮತ್ತು ನಾಲ್ಕು ಮರಿ ಹುಲಿಗಳ ಸಾವು, ಪಚ್ಚೆದೊಡ್ಡಿಯಲ್ಲಿ ವಿಷ ಹಾಕಿ ಹುಲಿ ಕೊಂದು ತುಂಡು ತುಂಡು ಮಾಡಿ ಕೊಂದಿದ್ದ ಪ್ರಕರಣಗಳು ಸಮಾಜವನ್ನು ಬೆಚ್ಚಿ ಬೀಳಿಸಿದ್ದವು. ಇದೀಗ ಗುಂಡಾಲ್ ಜಲಾಶಯದಲ್ಲಿ ಕಳೇಬರ ಪತ್ತೆಯಾದ ಹುಲಿಯ ಪ್ರಕರಣ ಮತ್ತೆ ಕಳವಳ ಹುಟ್ಟುಹಾಕಿದೆ. ಬಲಿಷ್ಠವಾಗಿದ್ದ ಗಂಡು ಹುಲಿಯನ್ನು ಅರಣ್ಯ ಕಳೆದುಕೊಂಡಿದೆ. ಆಹಾರ ಸರಪಳಿಯಲ್ಲಿ ಪ್ರಧಾನ ಸ್ಥಾನದಲ್ಲಿರುವ ಹುಲಿಯ ಸಾವು ಅರಣ್ಯಕ್ಕೆ ಮಾತ್ರ ನಷ್ಟವನ್ನುಂಟು ಮಾಡಿಲ್ಲ. ನಾಡಿನಲ್ಲಿರುವ ಮನುಕುಲದ ಮೇಲೂ ಗೊತ್ತಾಗದೆ ಬೀರುವ ಪರಿಣಾಮವಾಗಿದೆ.
ಹುಲಿ ಸಾವಿಗೆ ಉರುಳು ಕಾರಣವೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.