ಮಂಗಲ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ತಾಲೂಕು ನರೇಗಾ ಸಂಯೋಜಕ ನಾರಾಯಣ್ ಮಾತನಾಡಿದರು. ಚಂದ್ರಶೇಖರ್, ದೊರೆಯಾ, ಮಹದೇವ ಇತರರಿದ್ದರು. 
ಚಾಮರಾಜನಗರ

ಮಂಗಲ ಗ್ರಾಮಸಭೆಯಲ್ಲಿ ದೂರಿನ ಸುರಿಮಳೆ

ಪ್ರಮುಖ ಮುಖ್ಯಾಂಶಗಳು

  • ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ 15ನೇ ಹಣಕಾಸು ಯೋಜನೆ ಗ್ರಾಮಸಭೆ
ಹನೂರು: ತಾಲೂಕಿನ ಮಂಗಲ ಗ್ರಾಮದ ದೊಡ್ಡಕೆರೆ ಸಮೀಪ ಮಂಗಳವಾರ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ದೂರಿನ ಮಹಾಪೂರವೇ ಹರಿದು ಬಂತು.
ಆಡಳಿತಾಧಿಕಾರಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಆರಂಭಕ್ಕೂ ಮುನ್ನವೇ ಗ್ರಾಮದ ನಿವಾಸಿ ಮಂಟೇಸ್ವಾಮಿ ಮಾತನಾಡಿ, ಗ್ರಾಮಸಭೆಯ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ಇಲ್ಲ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಹೊರತುಪಡಿಸಿದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಆಗಮಿಸಿದ್ದಾರೆ. ಹಾಗಾಗಿ ಸಭೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ? ಇನ್ನು ಕಳೆದ ಬಾರಿ ನಡೆದ ಸಭೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳ ಬಗ್ಗೆ ದಾಖಲಾತಿ ನೀಡದ ಕಾರಣ ಮುಂದೂಡಿದ್ದ ಸಭೆಯನ್ನು ನಡೆಸಿಲ್ಲ. ಆದ್ದರಿಂದ ಈ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ತಾಲೂಕು ನರೇಗಾ ಸಂಯೋಜಕ ನಾರಾಯಣ್ ಅವರು ಸಭೆ ನಡೆದಿರುವುದರ ಬಗ್ಗೆ ಮಾಹಿತಿ ತಿಳಿಸಿದರು.
ಇನ್ನು ನರೇಗಾ ಯೋಜನೆಯಡಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಗ್ರಾಮದೊಳಗಿನ ಕೆರೆಯನ್ನು ಅಭಿವೃದ್ಧಿ ಪಡಿಸದೇ ಗ್ರಾಮದ ಹೊರಗಿನ ಕೆರೆಗಳ ಅಭಿವೃದ್ಧಿಗೆ ಹಣ ವ್ಯಯಿಸಿರುವುದರ ಬಗ್ಗೆ ನೆರೆದಿದ್ದ ಗ್ರಾಮಸ್ಥರಿಂದ ಒಕ್ಕೊರಲಿನಿಂದ ಆಕ್ಷೇಪ ಕೇಳಿ ಬಂತು. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ಗಿಡ್ಡನಕೆರೆ ಅಭಿವೃದ್ಧಿ 6 ಲಕ್ಷ ರೂ., ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ಬಣ್ಣ ಬಳಿಯುವಿಕೆಗೆ 88 ಸಾವಿರ ರೂ., ಹಣ ಬಳಕೆ ಮಾಡಿರುವುದರ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮವಹಿಸುವುದಾಗಿ ನರೇಗಾ ಸಂಯೋಜಕ ನಾರಾಯಣ್ ತಿಳಿಸಿದರು.
ಇನ್ನು ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. 15ನೇ ಹಣಕಾಸು ಯೋಜನೆಯ ಕಾಮಗಾರಿಯಲ್ಲಿ ಅನುದಾನ ದುರ್ಬಳಕೆಯಾಗಿದೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಆರೋಪಿಸಿ ಅಗತ್ಯ ಕ್ರಮವಹಿಸುವಂತೆ ಒತ್ತಾಯಿಸಿದರು. ಇದಕ್ಕೆ ಅಧಿಕಾರಿಗಳು ಅಗತ್ಯ ಭರವಸೆ ನೀಡಿದರು.
ತೋಟಗಾರಿಕೆ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಮಹದೇವ, ಪಿಡಿಒ ದೊರೆಯಾ, ಸಮಾಜ ಕಲ್ಯಾಣ ಇಲಾಖೆಯ ಮಧು ಇನ್ನಿತರರು ಇದ್ದರು.