ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಾನುವಾರ ಮಲೆ ಮಹದೇಶ್ವರ ಬೆಟ್ಟಕ್ಕೆ ಜನರನ್ನು ಕರೆದೊಯ್ಯಲು ಬಸ್ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಏರಲು ಮುಗಿಬಿದ್ದ ಜನರು. ದೀಪಾವಳಿ
ಚಾಮರಾಜನಗರ

ಮ.ಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ

ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಜನದಟ್ಟಣೆ

ಕೊಳ್ಳೇಗಾಲ: ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಾನುವಾರ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಲು ಭಕ್ತರು ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹತ್ತಲು ಮುಗಿಬಿದ್ದರು.

ಅಮಾವಾಸ್ಯೆ ಹಿನ್ನೆಲೆಯಲ್ಲಿ ಸೋಮವಾರ ಹಲರವೆ ಉತ್ಸವ ಸೇರಿದಂತೆ ವಿಶೇಷ ಪೂಜೆ ನಡೆಯಲಿದೆ. ಹಾಗಾಗಿ ಸಾವಿರಾರು ಸಂಖ್ಯೆಯಲ್ಲಿ ಮಾದಪ್ಪ ಪರುಶೆ ಬೆಟ್ಟದ ಕಡೆಗೆ ಹರಿದು ಬಂದಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು.

ಪ್ರಯಾಣಿಕರನ್ನು ಹತ್ತಿಸಿ ಕೊಳ್ಳಲು ನಿಲ್ದಾಣಕ್ಕೆ ಬರುವ ಬಸ್‌ಗಳ ಹಿಂದೆ ಓಡುತ್ತಿದ್ದ ಜನರು ನಾ ಮುಂದು ತಾ ಮುಂದು ಎಂದು ಬಸ್ ಸೀಟ್ ಹಿಡಿಯಲು ಹರಸಾಸಹ ಪಡುತ್ತಿದ್ದರು. ಬೆಟ್ಟಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಿದ್ದ ಕಾರಣ ಹಲವಾರು ಜನರು ಬಸ್ ನಿಲ್ದಾಣದೊಳಗೆ ಬಸ್ ತೆರಳುವ ಮುನ್ನವೇ ವಿಷ್ಣುವರ್ದನ್ ರಸ್ತೆಯಲ್ಲಿ ಬಸ್ ಅಡ್ಡಗಟ್ಟಿ ಹತ್ತುತ್ತಿದ್ದ ದೃಶ್ಯ ಕಂಡಬಂತು. ಬಸ್‌ನಲ್ಲಿದ್ದ ನಿಗದಿತ ಸೀಟ್ ಗಳಿಗಿಂತಲೂ ಹೆಚ್ಚು ಜನರು ಪ್ರಯಾಣಿಸಿದರು. ಇದರಿಂದ ಬಹುತೇಕ ಭಕ್ತರು ಖಾಸಗಿ ಬಸ್‌ಗಳನ್ನೇ ಹಿಡಿದು ಬೆಟ್ಟಕ್ಕೆ ತೆರಳಿದರು.

ವಿವಿಧ ಡಿಪೋಗಳಿಂದ ಹೆಚ್ಚುವರಿ ವಾಹನ: ಭಕ್ತರ ಅನುಕೂಲಕ್ಕೆ ಮೈಸೂರು ನಗರ ಸಾರಿಗೆ 90, ಮೈಸೂರು ಗ್ರಾಮಾಂತರ ಸಾರಿಗೆ 90, ಮಂಡ್ಯ ವಿಭಾಗದಿಂದ 40, ಚಾಮರಾಜನಗರ ವಿಭಾಗದಿಂದ 90, ಬೆಂಗಳೂರು ದಕ್ಷಿಣ ವಿಭಾಗದಿಂದ 40 ಬಸ್ ಸೇರಿಂದ ಒಟ್ಟು 350 ಬಸ್‌ಗ ಳನ್ನು ನಿಯೋಜಿಸಲಾಗಿದೆ. ಅಲ್ಲದೆ ಖಾಸಗಿ ಬಸ್‌ಗಳೂ ಸಂಚರಿಸುತ್ತಿವೆ. ಇಷ್ಟಾದರು ಬಸ್‌ಗಳು ಸಾಲದಂತಾಯಿತು. ಅಲ್ಲದೆ ಬಸ್ ಸೀಟ್ ಹಿಡಿಯುವ ಭರದಲ್ಲಿ ಅಪಾಯವನ್ನು ಲೆಕ್ಕಿಸದೆ ಜನರು ಬಸ್‌ಗಳ ಹಿಂದೆ ಓಡುತ್ತಿದ್ದ ದೃಶ್ಯ ಕಂಡುಬಂದವು.

ಸೂಕ್ತ ವ್ಯವಸ್ಥೆಯಾಗಲಿ: ಕೊಳ್ಳೇಗಾಲ ನಿಲ್ದಾಣದಲ್ಲಿ ಕಿರಿದಾದ ಬಸ್ ನಿಲುಗಡೆ ವ್ಯವಸ್ಥೆ ಇರುವುದರಿಂದ ವಾಹನ ದಟ್ಟನೆ ಉಂಟಾಗುತ್ತಿದೆ. ಈ ನಡುವೆ ಜನರು ರಸ್ತೆಯಲ್ಲಿ ನಿಂತಿರುವ ಬಸ್‌ಗಳನ್ನು ಹತ್ತಲು ಮುಗಿ ಬೀಳುತ್ತಿದ್ದಾರೆ. ಈ ವೇಳೆ ಪ್ರಯಾಣಿಕರ ಮಾತಿನ ಚಕಮಕಿ, ಗಲಾಟೆ ಸಾಮಾನ್ಯ ಎನ್ನುವಂತಾಗಿದೆ. ಸಂಬಂಧಪಟ್ಟವರು ಬಸ್ ನಿಲ್ದಾಣದೊಳಗೆ ಜನರು ವ್ಯವಸ್ಥಿತವಾಗಿ ಬಸ್ ಹತ್ತುವ ವ್ಯವಸ್ಥೆ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದೀಪಾವಳಿ ಜಾತ್ರೆ ವಿಶೇಷವಾಗಿ ವಿವಿಧ ಕೆಎಸ್ಸಾರ್ಟಿಸಿ ಘಟಕಗಳಿಂದ 350 ಬಸ್‌ಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಆದರೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಾನುವಾರ ಬೆಟ್ಟಕ್ಕೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗಿದೆ.

* ಬೋಗನಾಯಕ, ವ್ಯವಸ್ಥಾಪಕ, ಕೆಎಸ್‌ಆರ್‌ಟಿಸಿ ಘಟಕ, ಕೊಳ್ಳೇಗಾಲ