ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ದೇವಸ್ಥಾನದ ಮುಂಭಾಗ ಶ್ರಾವಣ ಶನಿವಾರ ಪ್ರಯುಕ್ತ ಗರುಡೋತ್ಸವ ಜರುಗತು.  
ಚಾಮರಾಜನಗರ

ಬಿಳಿಗಿರಿರಂಗನಬೆಟ್ಟದಲ್ಲಿ ಭಕ್ತಸಾಗರ

ಪ್ರಮುಖ ಮುಖ್ಯಾಂಶಗಳು

  • ಶ್ರಾವಣಮಾಸದ ಎರಡನೇ ಶನಿವಾರ ವಿಶೇಷ ಪೂಜೆ
  • ಅದ್ದೂರಿ ಗರುಡೋತ್ಸವ

ಯಳಂದೂರು:

ಶ್ರಾವಣಮಾಸದ ಎರಡನೇ ಶನಿವಾರ ತಾಲೂಕಿನ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ಶ್ರೀಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಶನಿವಾರ ಬೆಳಗ್ಗೆಯಿಂದಲೇ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲಮ್ಮನವರಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ, ತುಳಸಿ ಸೇರಿದಂತೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಬೆಟ್ಟಕ್ಕೆ ಹೋಗಲು ಯಳಂದೂರು ಪಟ್ಟಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಭಕ್ತರು ಇರುವ ಬಸ್‌ಗಳನ್ನು ಹತ್ತಲು ಪ್ರಯಾಸ ಪಡುತ್ತಿದ್ದ ದೃಶ್ಯ ಕಂಡುಬಂತು.
ದೇಗುಲ ಸಮೀಪದ ದಾಸೋಹ ಭವನದಲ್ಲಿ ಸಾವಿರಾರು ಭಕ್ತರಿಗೆ ಮಾಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿತ್ತು. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಸೇರಿದಂತೆ ಇತರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿದ್ದರು. ಪಟ್ಟಣದಿಂದ ಬಿಳಿಗಿರಿರಂಗನಬೆಟ್ಟಕ್ಕೆ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿದ್ದರೂ ಸಾಕಾಗಲಿಲ್ಲ.
ಶ್ರೀ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲಮ್ಮನವರ ಉತ್ಸವಮೂರ್ತಿಯ ಗರುಡೋತ್ಸವ ಅದ್ದೂರಿಯಾಗಿ ಜರುಗಿತು. ದೀವಟಿಗೆ ಸೇರಿದಂತೆ ಇತರ ಸೇವೆಗಳನ್ನು ಭಕ್ತರು ನೆರವೇರಿಸಿದರು. ಇಒ ಸುರೇಶ್, ಪಾರುಪತ್ತೇದಾರ್ ರಾಜಣ್ಣ ಇತರರು ಇದ್ದರು.