ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಡಿಸಿ ಶ್ರೀರೂಪಾ ಅಧ್ಯಕ್ಷತೆಯಲ್ಲಿ ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸಭೆ ಬುಧವಾರ ನಡೆಯಿತು. ಎಸ್ಪಿ ಎಂ.ಮುತ್ತುರಾಜು, ಜಿಪಂ ಸಿಇಒ ಮೋನಾರೋತ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು ಮತ್ತು ಇತರರು ಹಾಜರಿದ್ದರು. 
ಚಾಮರಾಜನಗರ

ಕಾದ ಕಾವಲಿಯಂತಾದ ಸಭೆ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಮೀಟಿಂಗ್ ಆಯೋಜನೆ ಲೋಪದ ಕುರಿತು ಅಧಿಕಾರಿಗಳಿಗೆ ತರಾಟೆಗೆ
  • ಈಗ ಚರ್ಚೆಗೆ ಬಂದ 2024ರ ಅನುಪಾಲನಾ ವರದಿ ಬಗ್ಗೆ ಬ್ರೇಕ್
ಚಾಮರಾಜನಗರ: ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತ ರಕ್ಷಣಾ ಸಮಿತಿ ಸಭೆಯ ಆಯೋಜನೆಯಲ್ಲಿ ಲೋಪಗಳಾಗಿವೆ ಎಂದು ಕೆಲವು ಮುಖಂಡರು ಸಿಟ್ಟಿಗೆದ್ದರೆ, ಇನ್ನು ಕೆಲವರು ಸಭೆಯನ್ನೇ ಬಹಿಷ್ಕರಿಸಿ ಹೊರನಡೆದರು. ಇದರಿಂದಾಗಿ ಆಕ್ರೋಶ, ಗದ್ದಲದ ಗೂಡಾದ ಸಭೆ ಕಾದ ಕಾವಲಿಂಯತಾಯಿತು.
ನಗರದ ಜಿಲ್ಲಾಡಳಿತ ಭವನದ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ, ಪಂಗಡದ ಹಿತರಕ್ಷಣಾ ಸಭೆ ಪ್ರಾರಂಭದಲ್ಲೇ ಮುಖಂಡರ ಮಾತುಗಳಿಂದ ಬಿರುಸು ಪಡೆದುಕೊಂಡಿತು.
2024ರ ಆ.23ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯ ನಡವಳಿಯ ಅನುಪಾಲನಾ ವರದಿಯ ಚರ್ಚೆ ಶುರುವಾಯಿತು. ಹಲವು ವರ್ಷಗಳ ಬಳಿಕ ಸಭೆ ನಡೆಯುತ್ತಿರುವುದರಿಂದ ಹಿಂದಿನ ಅನುಪಾಲನಾ ವರದಿಯಲ್ಲಿ 163 ಅಂಶಗಳ ಚರ್ಚೆ ಇತ್ತು. ಬುಧವಾರ ಮಧ್ಯಾಹ್ನ 3 ಗಂಟೆಗೆ ಶುರುವಾದ ಸಭೆಯಲ್ಲಿ ಇದರ ಬಗ್ಗೆಯೇ ಚರ್ಚೆ ನಡೆಯುತ್ತಿದ್ದರೆ ಅನುಪಾಲನಾ ವರದಿಗೆ ಸಭೆ ಸೀಮಿತಗಾಗುತ್ತದೆ ಎಂದು ಕೆಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಅನುಪಾಲನಾ ವರದಿಯಲ್ಲಿ ಕಾಟಾಚಾರಕ್ಕೆ ಅಧಿಕಾರಿಗಳು ಉತ್ತರ ನೀಡಿದ್ದು, ಅಂತವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಭೆಯನ್ನೇ ಮುಟಕುಗೊಳಿಸಿ ಬೆಳಗ್ಗೆ ವೇಳೆಯಲ್ಲಿ ನಿಗದಿ ಮಾಡಲು ಆಗ್ರಹಿಸಿದರು. ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ, 2024ರಲ್ಲಿ ನಡೆದಿದ್ದ ಸಭೆಯ ಅನುಪಾಲನಾ ವರದಿಯ ಆಧಾರದ ಮೇಲೆ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮವಹಿಸಲಾಗುವುದು. ಇದರ ಹೊರತಾಗಿ ಪ್ರಸ್ತುತ ಕುಂದು-ಕೊರತೆಗಳ ಬಗ್ಗೆ ಚರ್ಚೆ ಮಾಡಿ ಎಂದು ಮುಖಂಡರನ್ನು ಕೇಳಿಕೊಂಡ ಹಿನ್ನೆಲೆಯಲ್ಲಿ ಸಭೆ ಶುರುವಾಯಿತು.
ಮುಖಂಡ ಸಂಘಸೇನ ಮಾತನಾಡಿ, ಎಸ್ಸಿ.ಎಸ್ಟಿ ಸಮುದಾಯದ ಮೇಲೆ ನಿರಂತರವಾಗಿ ದಾಳಿ, ದೌರ್ಜನ್ಯಗಳು ನಡೆಯುತ್ತಿವೆ. ಕರಿಕಲ್ಲು ಕ್ವಾರಿಗಳ ಮಾಲೀಕರು ಕಾನೂನು ಪಾಲನೆ ಮಾಡುತ್ತಿಲ್ಲ. ಎಸ್ಸಿ/ಎಸ್ಟಿ ಸಮುದಾಯದವರಿಗೆ ಸೇರಿದ ಪರಭಾರೆ ಮಾಡಬಾರದ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ಕ್ವಾರಿ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ 205 ಜೀತಮುಕ್ತರಿದ್ದಾರೆ. ಇವರಿಗೆ ಎಚ್.ಡಿ.ಾರೆಸ್ಟ್‌ನಲ್ಲಿ 1.10 ಎಕರೆ ಜಮೀನು ನೀಡಲಾಗಿದ್ದು, ಅನ್ಯರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜೀತ ಮುಕ್ತರಿಗೆ ಜಮೀನು ಸಿಕ್ಕಿಲ್ಲ ಎಂದು ಹೇಳಿದರು.
ಮುಖಂಡ ಭಾನುಪ್ರಕಾಶ್ ಮಾತನಾಡಿ, ಕೊಳ್ಳೇಗಾಲ ತಾಲೂಕಿನ ತಿಮ್ಮರಾಜೀಪು, ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾರಂಭಿಸಲು ಅವಕಾಶವಿದೆ. ಸಮುದಾಯದ 80 ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಬಹುದಾಗಿದ್ದು, ಇಲ್ಲಿ ಕೋರ್ಸ್ ಆರಂಭಿಸಿಲ್ಲ ಎಂದು ದೂರಿದರು. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು ಮಾತನಾಡಿ, ಎರಡೂ ಕಾಲೇಜುಗಳು ಕ್ರೈಸ್ಟ್ ವ್ಯಾಪ್ತಿಗೆ ಬರುತ್ತವೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಕೋರ್ಸ್‌ಗಳು ಆರಂಭವಾಗಿವೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ತಾಲೂಕುಗಳ ಮುಖಂಡರು ಹಾಜರಾದರು.
ತಾಯಂದಿರ ಮರಣ ತನಿಖೆಯಾಗಲಿ:
ಜಿಲ್ಲೆಯಲ್ಲಿ ತಾಯಂದಿರ ಮರಣ ಪ್ರಮಾಣ ಹೆಚ್ಚಳವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ್ ಇದನ್ನು ಮರೆಮಾಚುತ್ತಿದ್ದಾರೆ. ಸಂತಾನ ಶಕ್ತಿ ಹರಣ ಶಸಚಿಕಿತ್ಸೆಯಲ್ಲಿ ಗುರಿ ಮೀರಿದ ಸಾಧನೆ ತೋರಲು ಭಿಕ್ಷಕರು, ಒಂದೇ ಮನೆಯಲ್ಲಿ ಪತಿ-ಪತ್ನಿಗೂ ಶಸಚಿಕಿತ್ಸೆ ಮಾಡುತ್ತಿದ್ದಾರೆ. ಇವುಗಳ ಕುರಿತು ತನಿಖೆ ನಡೆಸಬೇಕೆಂದು ಎಂದು ಹೊಂಗನೂರು ಧರಣೇಂದ್ರ ಒತ್ತಾಯಿಸಿದರು. ಇದಕ್ಕೆ ಡಿಎಚ್‌ಒ ಡಾ.ಚಿದಂಬರ್ ಉತ್ತರಿಸಿ, ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡಲು ವಿವಿಧ ಇಲಾಖೆಗಳ ಸಹಯೋಗ ಪಡೆದುಕೊಂಡು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ಸಂತಾನ ಶಕ್ತಿ ಹರಣ ಶಸಚಿಕಿತ್ಸೆಯನ್ನು ವೈದ್ಯರು, ಪೊಲೀಸರು ಇತರರೂ ಮಾಡಿಸಿಕೊಂಡಿದ್ದಾರೆ. ಭಿಕ್ಷುಕರಿಗೆ ಶಸಚಿಕಿತ್ಸೆ ಮಾಡಲಾಗಿದೆ ಎನ್ನುವ ಯಾವುದಾರೂ ಒಂದು ಪ್ರಕರಣವಿದ್ದರೂ ಪ್ರತ್ಯಕ್ಷವಾಗಿ ತೋರಿಸಲಿ. ಇವುಗಳ ಕುರಿತು ತನಿಖೆಯಾಗಲಿ ಎಂದು ಹೇಳಿದರು.
ರೂಪಾ ಸಾವು ವರದಿ ಬಂದ ಬಳಿಕ ಕ್ರಮ:
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ತಾಲೂಕಿನ ನಂಜರಾನಪುರದ(ಅಗ್ರಹಾರ) ಗರ್ಭಿಣಿ ರೂಪಾ ಹೆರಿಗೆ ಸಮಯದಲ್ಲಿ ಮೃತಪಟ್ಟಳು. ಈ ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿರುವ ವೈದ್ಯರ ವಿರುದ್ಧ ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲವೆಂದು ಮುಖಂಡ ಶೇಖರ್ ಪ್ರಶ್ನಿಸಿದರು. ಸಿಮ್ಸ್ ಡೀನ್ ಡಾ.ಮಂಜುನಾಥ್ ಅನ್ಯ ಕರ್ತವ್ಯಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಅವರ ಪರವಾಗಿ ಸಭೆಗೆ ಬಂದಿದ್ದ ಡಾ.ಮಾರುತಿ ಮಾತನಾಡಿ, ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಲು ಬೇರೆ ಕಾಲೇಜಿನ ವೈದ್ಯರ ತಂಡವನ್ನು ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಮಾತನಾಡಿ, ಪ್ರಕರಣದ ವರದಿ ಬಂದ ಬಳಿಕ ಕ್ರಮವಹಿಸಲಾಗುತ್ತದೆ ಎಂದರು. ಪ್ರಸ್ತುತ ತನಿಖೆ ಯಾವ ಹಂತದಲ್ಲಿದೆ ಎಂದು ಮುಖಂಡ ಶೇಖರ್ ಪ್ರಶ್ನಿಸಿದ್ದಕ್ಕೆ ಡಿಸಿ ಶ್ರೀರೂಪಾ ಪ್ರತಿಕ್ರಿಯಿಸಿ, ತನಿಖೆಯ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ವರದಿ ಬಂದ ಬಳಿಕ ಅದರ ಆಧಾರದ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಭೆ ಬಹಿಷ್ಕರಿಸಿ ನಡೆದ ಎಸ್ಟಿ ಮುಖಂಡರು:
ಎಸ್ಟಿ/ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯನ್ನು ಎಸ್ಟಿ ಸಮುದಾಯದ ಮುಖಂಡರು ಬಹಿಷ್ಕರಿಸಿ ಹೊರನಡೆದರು. ಈ ಕುರಿತು ವಿಜಯವಾಣಿಯೊಂದಿಗೆ ಕೃಷ್ಣನಾಯಕ್ ಮಾತನಾಡಿ, ಕಳೆದ 3 ವರ್ಷಗಳಿಂದ ಎಸ್ಟಿ ಸಮುದಾಯದವರ ಸಭೆಯನ್ನು ಪ್ರತ್ಯೇಕವಾಗಿ ಕರೆಯಬೇಕೆಂದು ಕೇಳಿಕೊಳ್ಳುತ್ತಲೇ ಇದ್ದರೂ ಆಯೋಜನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾವು ಸಭೆಯನ್ನು ಬಹಿಷ್ಕಾರ ಮಾಡಿದ್ದೇವೆ ಎಂದರು.