ಚಿಕ್ಕರಂಗಶೆಟ್ಟಿ ದೊಡ್ಡಿಯ ಜಮೀನೊಂದರಲ್ಲಿ ಒಂಟಿ ಸಲಗ ಸೋಲಾರ್ ತಂತಿ ಬೇಲಿಯನ್ನು ನಾಶಪಡಿಸಿ ಮುನ್ನುಗ್ಗುತ್ತಿರುವುದು.
ಹನೂರು : ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಚಿಕ್ಕರಂಗಶೆಟ್ಟಿ ದೊಡ್ಡಿಯ ಜಮೀನಿಗೆ ಶುಕ್ರವಾರ ತಡರಾತ್ರಿ ಒಂಟಿ ಸಲಗ ಲಗ್ಗೆ ಇಟ್ಟು ಸೋಲಾರ್ ತಂತಿ ಬೇಲಿಯನ್ನು ನಾಶಪಡಿಸಿದೆ.
ಗ್ರಾಮದ ನಂಜಶೆಟ್ಟಿ ಅವರ ಜಮೀನಿಗೆ ರಾತ್ರಿ ಸುಮಾರು 12 ಗಂಟೆಯಲ್ಲಿ ಸಮೀಪದ ಅರಣ್ಯ ಪ್ರದೇಶದಿಂದ ಬಂದ ಕಾಡಾನೆ, ಕಟಾವು ಮಾಡಿ ರಾಶಿ ಹಾಕಲಾಗಿದ್ದ ಮುಸುಕಿನ ಜೋಳವನ್ನು ತಿಂದಿದೆ. ಬಳಿಕ 3 ತೆಂಗಿನ ಮರ ಹಾಗೂ ಸೋಲಾರ್ ತಂತಿ ಬೇಲಿಯನ್ನು ನಾಶಪಡಿಸಿದೆ.
ಈ ಒಂಟಿ ಸಲಗ ಕಳೆದ 6 ತಿಂಗಳಿನಿಂದ ಈ ಭಾಗದ ಜಮೀನುಗಳಿಗೆ ಆಗಾಗ್ಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಲೇ ಇದೆ. ಜತೆಗೆ ರಸ್ತೆ ಬದಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಕಾಡಾನೆ ಹಾವಳಿಯನ್ನು ತಡೆಗಟ್ಟುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಜತೆಗೆ ಪ್ರತಿಭಟನೆಯನ್ನೂ ನಡೆಸಲಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ. ಪರಿಣಾಮ ಈ ಭಾಗದಲ್ಲಿ ಒಂಟಿಸಲಗದ್ದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಇನ್ನಾದರೂ ಈ ಬಗ್ಗೆ ಎಚ್ಚೆತ್ತು ಪ್ರಾಣಾಪಾಯ ಸಂಭವಿಸುವ ಮುನ್ನ ಒಂಟಿ ಸಲಗವನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪರಿಸರ ಪ್ರೇಮಿ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.