ಚಾಮರಾಜನಗರ ತಾಲೂಕಿನ ಹೆಗ್ಗೋಠರ ಗ್ರಾಮದ ಮಹಿಳಾ ಭಕ್ತರು ಕಾಲ್ನಡಿಗೆ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿರುವುದು.
ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಕೊನೇ ಕಾರ್ತಿಕ ಸೋಮವಾರದಂದು ನಡೆಯುವ ದೀಪೋತ್ಸವ ಹಾಗೂ ತೆಪ್ಪೋತ್ಸವದಲ್ಲಿ ಭಾಗಿಯಾಗಲು ಹೆಚ್ಚಿನ ಭಕ್ತರು ಪಾದಯಾತ್ರೆ ಮೂಲಕ ಬೆಟ್ಟಕ್ಕೆ ತೆರಳುತ್ತಿದ್ದಾರೆ.
ಈಗಾಗಲೇ ಮಾದಪ್ಪನ ಸನ್ನಿಧಿಯಲ್ಲಿ 3 ಸೋಮವಾರಗಳಂದು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಸಾವಿರಾರು ಭಕ್ತರು ಭೇಟಿ ನೀಡಿದ್ದರು. ಕೊನೆಯ ಸೋಮವಾರದಂದು (ನ.17) ಬೆಳಗ್ಗೆ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಜತೆಗೆ ರಾತ್ರಿ ದೀಪದಗಿರಿ ಒಡ್ಡುವಿನಲ್ಲಿ ದೀಪೋತ್ಸವ, ದೊಡ್ಡಕೆರೆ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯಲಿದೆ. ಚಾ.ನಗರ ಸೇರಿದಂತೆ ನಂಜನಗೂಡು, ನರಸೀಪುರ, ಮೈಸೂರು, ಮದ್ದೂರು, ಮಳವಳ್ಳಿ ಹಾಗೂ ಇತರ ಕಡೆಗಳಿಂದ ಹೆಚ್ಚಿನ ಭಕ್ತರು 2 ದಿನಗಳಿಂದ ತಂಡೋಪತಂಡವಾಗಿ ಹನೂರು ಮಾರ್ಗವಾಗಿ ಕಾಲ್ನಡಿಗೆ ಮೂಲಕ ಮ.ಬೆಟ್ಟಕ್ಕೆ ತೆರಳುತ್ತಿದ್ದಾರೆ.
ಮಾದಪ್ಪನ ದೇವರ ಗುಡ್ಡರು ಹಾಡು ಹಾಡುವುದರ ಜತೆಗೆ ಕಂಸಾಳೆ ಬಾರಿಸುತ್ತ ಸಾಗುತ್ತಿದ್ದರೆ, ಯುವಕರು ಮಾದಪ್ಪನಿಗೆ ಜಯಘೋಷಗಳನ್ನು ಮೊಳಗಿಸುತ್ತ ಉತ್ಸಾಹದಿಂದ ಪಯಣ ಬೆಳೆಸಿದ್ದಾರೆ. ಮಾರ್ಗದ ಅಲ್ಲಲ್ಲಿ ಅಡುಗೆ ತಯಾರಿಸಿ ಊಟ ಸೇವಿಸಿ ವಿಶ್ರಾಂತಿ ಪಡೆಯುವ ಮೂಲಕ ತೆರಳುತ್ತಿರುವ ಭಕ್ತರು ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿ ಮ.ಬೆಟ್ಟಕ್ಕೆ ತಲುಪಲಿದ್ದಾರೆ.
ಚಾಮರಾಜನಗರ ತಾಲೂಕಿನ ಹೆಗ್ಗೋಠರ ಗ್ರಾಮದ ಮಹಿಳಾ ಭಕ್ತರು ಕಾಲ್ನಡಿಗೆ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿರುವುದು.