ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪಠ್ಯೇತರ ಚಟುವಟಿಕೆ ಸಮಾರೋಪ ಸಮಾರಂಭವನ್ನು ಮಹದೇವ ಶಂಕನಪುರ ಉದ್ಘಾಟಿಸಿದರು. ಡಾ.ಕವಿತಾ, ಮಹದೇವಸ್ವಾಮಿ, ಡಾ.ತೇಜಸ್ವಿನಿ, ಸುರೇಶ, ಪ್ರಮೋದ್‌ಕುಮಾರ್ ಇದ್ದರು.
ಗುಂಡ್ಲುಪೇಟೆ: ನಮ್ಮ ಇತಿಹಾಸ ಸಂಸ್ಕೃತಿ ಜಾನಪದ ಪರಂಪರೆಗಳ ವಕ್ತಾರರಾದ ಜಿಲ್ಲೆಯ ಜನಪದ ಗಾಯಕರು ಮೌಖಿಕ ಕಾವ್ಯಗಳನ್ನು ಜೀವಂತವಾಗಿ ಇಡುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಂಸ್ಕೃತಿ ಚಿಂತಕ, ಸಾಹಿತಿ ಮಹದೇವ ಶಂಕನಪುರ ಅಭಿಪ್ರಾಯಪಟ್ಟರು.
ತಾಲೂಕಿನ ಕಬ್ಬಹಳ್ಳಿ ಗ್ರಾಮದ ಶ್ರೀ ಮದ್ದಾನೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪಠ್ಯೇತರ ಚಟುವಟಿಕೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಸಾಹಿತ್ಯ ಜಾನಪದ ಮತ್ತು ಸಂಸ್ಕೃತಿಯ ಪ್ರತಿನಿಧಿಗಳು ಹಾಗೂ ರಾಯಭಾರಿಗಳು, ನಮ್ಮ ಜಿಲ್ಲೆ ರಾಜ್ಯ ದೇಶ ಮಾತ್ರವಲ್ಲ ವಿಶ್ವಕ್ಕೆ ಶ್ರೇಷ್ಠ ಕೊಡುಗೆ ನೀಡಿದ್ದು ಮಲೆ ಮಹದೇಶ್ವರ, ಮಂಟೇಸ್ವಾಮಿ ಜನಪದ ಮಹಾಕಾವ್ಯಗಳು ಜಗತ್ತಿನ ಸುಧೀರ್ಘ ಮತ್ತು ಮಹತ್ವ ಕಾವ್ಯ ಸ್ಥಳಗಳಾಗಿದ್ದು ಜಿಲ್ಲೆಯ ಕೊಡುಗೆಯಾಗಿದೆ. ವಿದ್ಯಾರ್ಥಿಗಳು ಮತ್ತು ಜಿಲ್ಲೆಯ ಜನಪದ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅರಿಯಬೇಕು. ಡಾ. ರಾಜಕುಮಾರ್-ಪುನೀತ್ ರಾಜಕುಮಾರ್ ನಮ್ಮ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಗಳು. ಅವರು ಪಠ್ಯ ಸಾಧನೆಗಿಂತ ಪಠ್ಯೇತರ ಚಟುವಟಿಕೆಯಾದ ನಟನೆ, ಹಾಡುಗಾರಿಕೆ ಮೂಲಕ ಜಗತ್ತಿನ ಶ್ರೇಷ್ಠ ಕಲಾವಿದರ ಸ್ಥಾನಕ್ಕೆ ಏರಿದರು. ಅದು ನಮಗೆ ಆದರ್ಶವಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಹಿತ್ಯ, ನೃತ್ಯ, ಸಂಗೀತ, ಜ್ಞಾನ ಪ್ರತಿಭೆಗಳ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಪಠ್ಯ- ಪಠ್ಯೇತರ ಎರಡೂ ಸಾಧನೆಯೇ ನಿಜವಾದ ಶಿಕ್ಷಣ. ಎಲ್ಲ ಅಸಮಾನತೆ, ಭೇದ-ಭಾವಗಳನ್ನು ಮೀರಬೇಕು. ಆಗ ಮಾತ್ರ ಶಿಕ್ಷಣಕ್ಕೆ ಬೆಲೆ ಬರುತ್ತದೆ. ಅಂಬೇಡ್ಕರ್, ಗಾಂಧೀಜಿ, ಬುದ್ಧ, ಬಸವಣ್ಣ ಅವರಂತಹ ಮಹಾತ್ಮರು, ಸಾಧಕರು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಕವಿತಾ ಮಾತನಾಡಿ, ಇತ್ತೀಚೆಗೆ ಜಗತ್ತಿನಲ್ಲಿ ವಿದ್ಯೆಯೂ ಹೈಜಾಕ್ ಆಗುತ್ತಿದೆ. ಇಂತಹ ಕಾಲದಲ್ಲಿ ನಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಬದುಕನ್ನು ಪ್ರೀತಿಸುವಂತೆ ಮಾಡುವ ಸಂಗತಿ ಪಠ್ಯೇತರ ಚಟುವಟಿಕೆ. ವಿದ್ಯಾರ್ಥಿಗಳ ಕ್ರಿಯಾಶೀಲ ಕೌಶಲ ಹೆಚ್ಚಾದಷ್ಟು ಬದುಕು ಗಟ್ಟಿಯಾಗುತ್ತದೆ. ಪ್ರಯತ್ನಗಳಲ್ಲಿ ಸೋಲಾದರೂ ಛಲ ಮಾತ್ರ ಬಿಡಬಾರದು. ನಿರಂತರ ಪ್ರಯತ್ನಗಳಿಂದಲೇ ಜೀವನದಲ್ಲಿ ಗೆಲುವು ಸಾಧ್ಯ ಎಂದು ತಿಳಿಸಿದರು.
ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಮಹೇಶ್ವರಿ, ರಾಜೇಶ್ವರಿ ಅವರಿಗೆ ದತ್ತಿ ಬಹುಮಾನ, ವಿಭಾಗವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯಾ ಅಧ್ಯಾಪಕರು ನಗದು ಬಹುಮಾನ, ಸಾಂಸ್ಕೃತಿಕ, ಕ್ರೀಡೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಐಕ್ಯೂಎಸಿ ಸಂಚಾಲಕ ಮಹದೇವಸ್ವಾಮಿ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ತೇಜಸ್ವಿನಿ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಸುರೇಶ, ಕ್ರೀಡಾ ಸಮಿತಿ ಸಂಚಾಲಕ ಪ್ರಮೋದ್‌ಕುಮಾರ್, ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಇದ್ದರು.