ಮಲೆ ಮಹದೇಶ್ವರ ವನ್ಯಜೀವಿಧಾಮದ ಸಾರಿಯಲ್ಲಿ ಪ್ರವಾಸಿಗರಿಗೆ ಕಂಡ ಕಪ್ಪು ಚಿರತೆ
- ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ವೈವಿಧ್ಯತೆಯ ದರ್ಶನ
- ಕಪ್ಪು ಚಿರತೆ, ಬಿಳಿ ಜಿಂಕೆ, ಹುಲಿ ಪರಿವಾರದ ದರ್ಶನ
ಚಾಮರಾಜನಗರ: ಪ್ರಕೃತಿ ಸಿರಿವಂತಿಕೆಯೊಂದಿಗೆ ಭಕ್ತಿ ಮತ್ತು ದೈವಿಕ ಶಕ್ತಿ ಬೇರುಬಿಟ್ಟಿರುವ ಈ ಕೌತುಕದ ಕಾಡಿನಲ್ಲಿ ಅಚ್ಚರಿಯಾಗುವಂತಾ ಜೀವ ವೈವಿಧ್ಯತೆ ಅನುರಣಿಸುತ್ತಿದೆ.
ಮಲೆ ಮಹದೇಶ್ವ ವನ್ಯಜೀವಿಧಾಮ ಪೂರ್ವ ಘಟ್ಟದ ದಟ್ಟಾರಣ್ಯ. ಮಾದಪ್ಪ ನಡೆದಾಡಿದ, ನೆಲೆ ನಿಂತ ಪೂಜ್ಯನೀಯ ಸ್ಥಳ. ಪ್ರಾಕೃತಿಕ ಮತ್ತು ಧಾರ್ಮಿಕವಾಗಿ ಮಹತ್ವ ಪಡೆದುಕೊಂಡಿರುವ ಕಾನನದಲ್ಲಿ ಅಪರೂಪದ ಪ್ರಾಣಿಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಿದೆ.
ಇತ್ತೀಚೆಗಷ್ಟೇ ಹನೂರು ತಾಲೂಕಿನ ಪಿ.ಜಿ.ಪಾಳ್ಯದ ಅರಣ್ಯದಲ್ಲಿ ಸಾರಿಗೆ ಬಂದಿದ್ದ ಪ್ರವಾಸಿಗರಿಗೆ ಕಪ್ಪು ಚಿರತೆಯ ದರ್ಶನವಾಗಿದೆ. ಇದೇ ರೀತಿಯ ಕರಿ ಚಿರತೆ ಕೆಲವು ವರ್ಷಗಳ ಹಿಂದೆ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯಪ್ರದೇಶದ ಬೈಲೂರಿನಲ್ಲಿ, ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಗು ಮತ್ತು ಮೊಳೆಯೂರು ಅರಣ್ಯ ಪ್ರದೇಶದಲ್ಲಿ ಕಪ್ಪು ಚಿರತೆ ಪ್ರತ್ಯಕ್ಷವಾಗಿತ್ತು. ಕಾಡುಗಳಲ್ಲಿ ಅಳಡಿಸಿದ್ದ ಕ್ಯಾಮರಾ ಟ್ರ್ಯಾಪ್‌ಗೆ ಕಪ್ಪು ಚಿರತೆಗಳು ಸೆರೆ ಸಿಕ್ಕಿದ್ದವು.
ಆದರೆ ಇವು ಸಾರಿಗೆ ಬಂದ ಪ್ರವಾಸಿಗರಿಗೆ ದರ್ಶನ ನೀಡಿ ಪುಳಕ ಹುಟ್ಟಹಾಕಿರಲಿಲ್ಲ. ಮೈಸೂರಿನ ನಾಗರಹೊಳೆಯ ಕಬಿನಿ ಹಿನ್ನೀರಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಪ್ಪು ಚಿರತೆ ಅಲ್ಲಿನ ಸಾರಿ ಪ್ರಿಯರ ಅತ್ಯಾಕರ್ಷಣೆಯಾಗಿತ್ತು. ಈಗ ಮಲೆ ಮಹದೇಶ್ವರ ವನ್ಯಜೀವಿಧಾಮದ ಸಾರಿಯಲ್ಲಿ ಕಪ್ಪು ಚಿರತೆ ದರ್ಶನವಾಗಿರುವುದು ಪ್ರಾಣಿ ಪ್ರಿಯರಿಗೆ ಖುಷಿ ನೀಡಿರುವುದಲ್ಲದೆ ಕಾಡಿನ ಜೀವ ವೈವಿಧ್ಯತೆಯ ಮೌಲ್ಯವನ್ನು ಎತ್ತಿ ಹಿಡಿದಿದೆ.
ವನ್ಯಜೀವಿಧಾಮವು ಕಪ್ಪು ಚಿರತೆಯ ಆವಾಸ ಸ್ಥಳವಾಗಿ ಗಮನ ಸೆಳೆದ ಕೆಲವೇ ದಿನಗಳಲ್ಲಿ ಬಿಳಿ ಬಣ್ಣದ ಜಿಂಕೆ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದೆ. ಹನೂರು ತಾಲೂಕಿನ ಬರ್ ವಲಯದಲ್ಲಿ ಬಿಳಿ ಜಿಂಕೆ ದರ್ಶನವಾಗಿದೆ. ಕೆಲವು ವರ್ಷಗಳ ಹಿಂದೆ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಮತ್ತು ಡಿ.ಬಿ.ಕುಪ್ಪೆ ವಲಯದ ನಾಗರಹೊಳೆ ಅಭಯಾರಣ್ಯದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಬಿಳಿ ಜಿಂಕೆ ಕಾಣಿಸಿಕೊಂಡಿತ್ತು. ಈ ಅಚ್ಚರಿ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲೂ ಆಗಿದೆ. ಕಪ್ಪು ಚಿರತೆ ಮತ್ತು ಬಿಳಿ ಜಿಂಕೆ ತನ್ನ ವರ್ಣದ ಮೂಲಕ ಗಮನ ಸೆಳೆದಿದೆ. ದೇಹದಲ್ಲಿ ಮೆಲನಿನ್ ವರ್ಣದ್ರವ್ಯ ಹೆಚ್ಚಾದರೆ ಸಾಮಾನ್ಯ ಬಣ್ಣವನ್ನು ಕಳೆದುಕೊಳ್ಳುವುದು ಸಹಜ. ಆದರೆ ಬದಲಿ ಬಣ್ಣದಿಂದಾಗಿ ಮೊದಲ ನೋಟದಲ್ಲೇ ಪ್ರವಾಸಿಗರನ್ನು ಗಮನ ಸೆಳೆದುಬಿಡುತ್ತವೆ. ಶಾಲೆ-ಕಾಲೇಜು ರಜೆಯ ಪ್ರಸ್ತುತ ದಿನಗಳಲ್ಲಿ ಪಿ.ಜಿ.ಪಾಳ್ಯ ಮತ್ತು ಅಜ್ಜೀಪುರದ ಸಾರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪಿ.ಜಿ.ಪಾಳ್ಯದ ಸಾರಿಗೆ ಕಳೆದ ಒಂದು ತಿಂಗಳಲ್ಲಿ 350-400 ಪ್ರವಾಸಿಗರು ಬಂದು ಸಾರಿ ಮಾಡಿದ್ದಾರೆ.
ವಿಶ್ವಾಸ ಮೂಡಿಸಿದ ತಾಯಿ-ಮಕ್ಕಳು:
ಕೆಲವು ತಿಂಗಳ ಹಿಂದೆ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಹುಲಿಗಳ ಜೀವಕ್ಕೆ ಆಪತ್ತಿನ ನೆಲೆಯಾಗಿಬಿಟ್ಟಿತ್ತು. ಆದರೀಗ ವ್ಯಾಘ್ರ ಸಂತತಿಯನ್ನು ಸುರಕ್ಷಿತವಾಗಿ ಪೋಷಿಸುತ್ತಿರುವ ವಿಶ್ವಾಸವನ್ನು ಮೂಡಿಸಿದೆ. ಸಾರಿ ವೇಳೆ ತಾಯಿ ಮತ್ತು ಮೂರು ಹುಲಿ ಮರಿಗಳ ದರ್ಶನವಾಗಿದೆ. ಪ್ರವಾಸಿಗರಗೆ ಸಂತಸ ಉಂಟಾಗಿದೆ. ಕೆಲವು ತಿಂಗಳ ಹಿಂದೆ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ದ್ವೇಷದ ಪ್ರತೀಕಾರಕ್ಕಾಗಿ ಐದು ಹುಲಿಗಳಿಗೆ ವಿಷ ಹಾಕಿಕೊಂಡಿದ್ದ ಪ್ರಕರಣ ಮತ್ತು ಪಚ್ಚೆದೊಡ್ಡಿಯಲ್ಲಿ ಹುಲಿಗೆ ವಿಷ ಹಾಕಿ ಕೊಂದು ತುಂಡು ತುಂಡು ಮಾಡಿ ಕತ್ತರಿಸಿದ್ದ ಕೃತ್ಯ ನಡೆದ ಬಳಿಕ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿಗಳ ಜೀವ ರಕ್ಷಣೆ ದೊಡ್ಡ ಸವಾಲಿನಿಂದ ಕೂಡಿದೆ ಎನ್ನುವಂತಾಗಿತ್ತು. ಈ ಆತಂಕದ ನಡುವೆ ತಾಯಿ ಮತ್ತು ಮೂರು ಹುಲಿ ಮರಿಗಳು ಚಿನ್ನಾಟವಾಡುತ್ತಾ ಕಾಡಿನಲ್ಲಿ ಓಡಾಡುತ್ತಿದ್ದ ದೃಶ್ಯ ಕಂಡಿರುವುದು ಪರಿಸರ ವ್ಯವಸ್ಥೆಯ ಮೇಲೂ ಸಕಾರಾತ್ಮಕ ಪರಿಣಾಮವನ್ನುಂಟು ಮಾಡಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮ ಅಪರೂಪದ ಪ್ರಾಣಿಯಾಗಿರುವ ಜೇನು ಹಿರ್ಕ(ಹನಿ ಬಡ್ಜರ್) ನೆಲೆಯಾಗಿಯೂ ಗುರುತಿಸಿಕೊಂಡಿದೆ. ಹನಿ ಬಡ್ಜರ್ ಅಳಿವಿನಂಚಿನಲ್ಲಿರುವ ಪ್ರಾಣಿ. ಕೆಲವು ವರ್ಷಗಳ ಹಿಂದೆ ವನ್ಯಜೀವಿ ವಿಜ್ಞಾನಿ ಡಾ.ಸಂಜಯ್ ಗುಬ್ಬಿ ಅವರು ಹನಿ ಬಡ್ಜರ್ ಇರುವಿಕೆಯನ್ನು ಪತ್ತೆ ಮಾಡಿದ್ದರು. ಕಾವೇರಿ ವನ್ಯಜೀವಿಧಾಮದೊಂದಿಗೆ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಜೇನು ಹಿರ್ಕ ಕಾಣಿಸಿಕೊಂಡಿತ್ತು.
ಪಿ.ಜಿ.ಪಾಳ್ಯದ ಸಾರಿ ಕೇಂದ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ಒಂದು ತಿಂಗಳಲ್ಲಿ 350-400 ಪ್ರವಾಸಿಗರು ಸಾರಿ ಮಾಡಿದ್ದಾರೆ.
ಪುಟ್ಟರಾಜು, ಆರ್‌ಎ್ಒ, ಪಿ.ಜಿ.ಪಾಳ್ಯ