ಪಟ್ಟಣದಲ್ಲಿ ಗುರುವಾರ ತ್ಯಾಗ, ಬಲಿದಾನಗಳ ಪ್ರತೀಕ ವಾದ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಹಿನ್ನೆಲೆ ಮುಸಲ್ಮಾನರು ಮೆರವಣಿಗೆ ನಡೆಸಿದರು. 
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಸಂಭ್ರಮದ ಮೆರವಣಿಗೆ

ಕೊಳ್ಳೇಗಾಲ : ತ್ಯಾಗ, ಬಲಿದಾನಗಳ ಪ್ರತೀಕವಾದ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಪಟ್ಟಣದಲ್ಲಿ ಸಂಭ್ರಮದಿಂದ ನಡೆಯಿತು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವಷರ್ದಂತೆ ಮುಸ್ಲಿಂ ಬಾಂಧವರು ಬೆಳಗ್ಗೆ ಪಟ್ಟಣದ ಖುದ್ದೂಸಿಯ ಮಸೀದಿ ವೃತ್ತದಲ್ಲಿ ಜಮಾಯಿಸಿದರು. ಬಳಿಕ ಮೆರವಣಿಗೆ ಹೊರಟು ರಸ್ತೆಯುದ್ದಕ್ಕೂ ಅಲ್ಲಾಹನ ಸ್ಮರಣೆ ಮಾಡುತ್ತಾ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಧರ್ಮಗುರು ಮೌಲಾನ ರಫೀಕ್ ಆಲಂ ನೇತೃತ್ವದಲ್ಲಿ ಸಾಮೂಹಿಕ ನಮಾಜ್ ನೆರವೇರಿಸಿ ಕೊಟ್ಟರು. ಬಳಿಕ ಧರ್ಮ ಗುರು ಹಜರತ್ ರೋಷನ್ ಅಹಮ್ಮದ್ ಅವರು ಬಕ್ರೀದ್ ಹಬ್ಬದ ಆಚರಣೆ ಕುರಿತು ಪ್ರವಚನ ನೀಡಿದರು.
ಪ್ರಾರ್ಥನೆ ನಂತರ ಮುಸ್ಲಿಮರು ಪರಸ್ಪರ ಶುಭಾಶಯ ಕೋರಿದರು. ಈದ್ಗಾ ಮೈದಾನ ಸಮೀಪ ಇರುವ ಪೂರ್ವಜರ ಸಮಾಧಿಗೆ ಪುಷ್ಪನಮಿಸಿ ಪ್ರಾರ್ಥಿಸಿದರು.