ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಿರುಪಯುಕ್ತವಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕ 
ಚಾಮರಾಜನಗರ

ಪಾಳು ಬಿದ್ದ ಘನತ್ಯಾಜ್ಯ ವಿಲೇವಾರಿ ಘಟಕ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಬೊಮ್ಮನಹಳ್ಳಿ ಗ್ರಾಮಸ್ಥರ ಆಕ್ರೋಶ
  • ಕಾಯಂ ಅಧಿಕಾರಿ ನಿಯೋಜನೆಗೆ ಪಟ್ಟು

ಗುಂಡ್ಲುಪೇಟೆ:

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಘನತ್ಯಾಜ್ಯ ವಿಲೇವಾರಿ ಘಟಕ ಗ್ರಾಮ ಪಂಚಾಯಿತಿ ನಿರ್ಲಕ್ಷೃದಿಂದ ನಿರುಪಯುಕ್ತವಾಗಿದೆ ಎಂದು ತಾಲೂಕಿನ ಬೊಮ್ಮನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2022ರಲ್ಲಿ ಗ್ರಾಮದಲ್ಲಿ ತೆರವುಗೊಳಿಸಿದ ಕಸವನ್ನು ಸಂಸ್ಕರಿಸಲು ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆಯ 12 ಲಕ್ಷ ರೂ.ಅನುದಾನದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿತ್ತು. ಆದರೆ, ಗ್ರಾಮ ಪಂಚಾಯಿತಿ ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದ ಪರಿಣಾಮ ಅಕ್ಷರಶಃ ನಿರುಪಯುಕ್ತವಾಗಿದೆ. ಜತೆಗೆ ಕಳಪೆ ಕಾಮಗಾರಿಯ ಕಾರಣ ಛಾವಣಿಗೆ ಅಳವಡಿಸಿದ್ದ ಶೀಟುಗಳು ಗಾಳಿಯ ರಭಸಕ್ಕೆ ಹಾರಿ ಹೋಗುತ್ತಿವೆ. ಪಂಚಾಯಿತಿಯ ನಿರ್ಲಕ್ಷೃದಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಪಾಳು ಬಿದ್ದಿದೆ.
ಈ ಹಿಂದೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರ್ಗಾವಣೆ ಆದ ನಂತರ ಇನ್ನೂ ಕಾಯಂ ಅಧಿಕಾರಿಯನ್ನು ನಿಯೋಜನೆ ಮಾಡಿಲ್ಲ. ಅಕ್ಕಪಕ್ಕದ ಇಲ್ಲವೇ ಬೇರೆ ಪಂಚಾಯಿತಿ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಪರಿಣಾಮ ಬೊಮ್ಮನಹಳ್ಳಿ ಗಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಜತೆಗೆ ಗ್ರಾಮದಲ್ಲಿ ತೆರವುಗೊಳಿಸಿದ ಕಸವನ್ನು ಸಾಗಿಸಲು ಬಳಸುತ್ತಿದ್ದ ಆಟೋ ಸಹಾ ಪಂಚಾಯಿತಿ ಮುಂದೆ ತುಕ್ಕು ಹಿಡಿದಿದೆ. ಗ್ರಾಮ ಪಂಚಾಯಿತಿಯು ಕಾಲಕಾಲಕ್ಕೆ ಕಸ ತೆರವು ಮಾಡದ ಪರಿಣಾಮ ಗ್ರಾಮದ ಎಲ್ಲ ಬೀದಿಗಳಲ್ಲಿ ಕಸ ರಾಶಿಯಾಗಿ ಹರಡಿದೆ. ಎಲ್ಲ ಬೀದಿಗಳ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.