ಚಾಮರಾಜನಗರದ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರೊ.ಎಂ.ಆರ್.ಗಂಗಾಧರ್ ಉದ್ಘಾಟಿಸಿದರು. ಎಸ್.ಬಿ.ಎಂ.ಪ್ರಸನ್ನ, ಪ್ರೊ. ಕೆ.ಎಂ. ಮಹದೇವನ್, ಡಾ.ಆರ್.ಮಹೇಶ್ ಇದ್ದರು.  
ಚಾಮರಾಜನಗರ

ಉತ್ತಮ ಆಲೋಚನೆಗಳಿಂದ ವಿಕಸಿತ ಭಾರತ ಸಾಧ್ಯ

ಎ.ಎಸ್.ಮಣಿಕಂಠ

ಪ್ರಮುಖ ಮುಖ್ಯಾಂಶಗಳು

  • ಚಾ.ನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅಭಪ್ರಾಯ
  • ರಾಷ್ಟ್ರೀಯ ಯುವ ಸಂಸತ್ ಉತ್ಸವ ಕಾರ್ಯಕ್ರಮ
ಚಾಮರಾಜನಗರ: ಪ್ರಸ್ತುತ ಆಧುನಿಕತೆಯ ಚಿಂತನೆಗಳು ಹಾಗೂ ಭಾರತೀಯ ಸಂಸ್ಕೃತಿಯ ಉತ್ತಮ ಆಲೋಚನೆಗಳನ್ನು ಯುವ ಸಮುದಾಯ ಅಳವಡಿಸಿಕೊಂಡರೆ ವಿಕಸಿತ ಭಾರತ ನಿರ್ಮಾಣ ಸಾಧ್ಯವಿದೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅಭಿಪ್ರಾಯಪಟ್ಟರು.
ನಗರದ ಹೊರ ವಲಯದಲ್ಲಿರುವ ಸುವರ್ಣ ಗಂಗೋತ್ರಿಯಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆ ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯ ಸಹಯೋಗದಲ್ಲಿ ವಿಕಸಿತ್ ಭಾರತ್ ಯೂತ್ ಪಾರ್ಲಿಮೆಂಟ್-2026 ಶೀರ್ಷಿಕೆಯಡಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಂಸತ್ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವವಿದ್ಯಾನಿಲಯಗಳು ಪದವಿಗಳನ್ನು ನೀಡುವುದರ ತೆಗೆ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸುವ ಕೇಂದ್ರಗಳಾಗಬೇಕು. ವಿಕಸಿತ್ ಭಾರತ್ ಯೂತ್ ಪಾರ್ಲಿಮೆಂಟ್ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉತ್ತಮ ಪ್ರಯತ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ದೇಶದ ಯುವಜನಸಂಖ್ಯೆ ದೊಡ್ಡ ಶಕ್ತಿಯಾಗಿದೆ. ಈ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಲು ವಿದ್ಯಾರ್ಥಿಗಳು ಸಾಮಾಜಿಕ ಹಾಗೂ ರಾಜಕೀಯ ಅರಿವು ಹೊಂದಿರಬೇಕು. ಸಂಸದೀಯ ವ್ಯವಸ್ಥೆಯಲ್ಲಿ ಚರ್ಚೆ, ಭಿನ್ನಾಭಿಪ್ರಾಯ ಮತ್ತು ನಿರ್ಣಯ ಪ್ರಮುಖ ಅಂಶಗಳಾಗಿದ್ದು, ಪರಸ್ಪರ ಗೌರವದಿಂದ ಸೌಹಾರ್ದಯುತವಾಗಿ ಚರ್ಚಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಎಸ್.ಬಿ.ಎಂ.ಪ್ರಸನ್ನ ಮಾತನಾಡಿ, ಯುವಕರೇ ದೇಶದ ನಿಜವಾದ ಶಕ್ತಿ ಮತ್ತು ಆಸ್ತಿಯಾಗಿದ್ದಾರೆ. ಭವಿಷ್ಯದ ಭಾರತ ನಿರ್ಮಾಣದ ಜವಾಬ್ದಾರಿ ಯುವಜನರ ಮೇಲಿದೆ. ಯೂತ್ ಪಾರ್ಲಿಮೆಂಟ್ ಕೇವಲ ಸ್ಪರ್ಧೆಯಲ್ಲ; ಅದು ಸಂಸತ್ತಿನ ವ್ಯವಸ್ಥೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಆಡಳಿತ ಕ್ರಮಗಳನ್ನು ತಿಳಿಯುವ ವೇದಿಕೆ ಎಂದು ಹೇಳಿದರು.
ಭಾರತವನ್ನು 2047 ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ಶಿಕ್ಷಣ, ತಂತ್ರಜ್ಞಾನ ಮತ್ತು ಸಮಾಜ ಸುಧಾರಣೆಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಮಾತನಾಡುವ ಕೌಶಲ್ಯ, ತಾರ್ಕಿಕ ಚಿಂತನೆ ಹಾಗೂ ನಾಯಕತ್ವ ಗುಣಗಳನ್ನು ವೃದ್ಧಿಸುತ್ತದೆ ಎಂದರು.
ಕುಲಸಚಿವ (ಮೌಲ್ಯಮಾಪನ) ಪ್ರೊ. ಕೆ.ಎಂ. ಮಹದೇವನ್ ಮಾತನಾಡಿ, ಯುವಜನತೆಗೆ ಚರ್ಚೆ ನಡೆಸಲು ಅವಕಾಶ ಕಲ್ಪಿಸಿರುವುದು ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿಗಳಲ್ಲಿ ರಾಜಕೀಯ ಹಾಗೂ ಸಾಮಾಜಿಕ ಆಡಳಿತ ಪ್ರಜ್ಞೆ ಬೆಳೆಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಸಿಂಡಿಕೇಟ್ ಸದಸ್ಯ ಪುಟ್ಟಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳನ್ನು ಅಂಕಗಳಿಗೆ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಾದ ಎನ್‌ಎಸ್‌ಎಸ್, ಕ್ರೀಡೆ, ಕೌಶಲ್ಯ ತರಬೇತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸತ್ ಕಲಾಪಗಳು ಮತ್ತು ತುರ್ತು ಪರಿಸ್ಥಿತಿ ಸಂದರ್ಭಗಳ ಕುರಿತು ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತವೆ ಎಂದರು.
ರಾಷ್ಟ್ರೀಯ ಸೇವಾ ಸಂಯೋಜನಾಧಿಕಾರಿ ಡಾ.ಆರ್.ಮಹೇಶ್ ಮಾತನಾಡಿ, ಯುವ ಸಂಸತ್ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಕಾರ್ಯವಿಧಾನವನ್ನು ಅರಿಯಲು ಉಪಯುಕ್ತವಾಗಿವೆ. ಅಧಿಕಾರ ತಾತ್ಕಾಲಿಕವಾದರೂ ಸಂವಿಧಾನ ಶಾಶ್ವತ. ಆದ್ದರಿಂದ ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರು.
ಜಿಲ್ಲಾ ಮಟ್ಟದ ಸ್ಪರ್ಧೆಯ ತೀರ್ಪುಗಾರರಾಗಿ ಡಾ.ಪಿ.ದೇವರಾಜು, ಶೈಲೇಶ್‌ಕುಮಾರ್, ಡಾ.ಶಶಿಕುಮಾರ್, ಶ್ವೇತಾ, ಬಿ.ಗುರುರಾಜು, ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಬೋಧಕರು ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.
ರಾಜ್ಯಮಟ್ಟಕ್ಕೆ 5 ವಿದ್ಯಾರ್ಥಿಗಳು ಆಯ್ಕೆ:
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಸುಮಾರು 55 ವಿದ್ಯಾರ್ಥಿಗಳು ತುಂಬಾ ಉತ್ಸಾಹದಿಂದ ಭಾಗವಹಿಸಿ ಸಂಸತ್ತಿನ ಮಾದರಿಯಲ್ಲಿ ಚರ್ಚೆ ನಡೆಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸ್ಪರ್ಧೆಯಲ್ಲು ಮೊದಲನೇ ಸ್ಥಾನ ಸಂತೋಷ, ಎರಡನೇ ಸ್ಥಾನ ಮಾದಲಾಂಬಿಕೆ, ಮೂರನೇ ಸ್ಥಾನ ರೋಹಿತ್, ನಾಲ್ಕನೇ ಸ್ಥಾನ ರಂಜಿನಿ ಹಾಗೂ ಐದನೇ ಸ್ಥಾನ ಪಡೆದ ಡಿ.ಪಿ.ದಯಾನಂದ ಅವರನ್ನು ಕಠಿಣ ಮೌಲ್ಯಮಾಪನವನ್ನು ಮಾಡುವ ಮೂಲಕ ರಾಜ್ಯ ಮಟ್ಟದ ವಿಕಸಿತ ಭಾರತ ಯುವ ಸಂಸತ್‌ಗೆ ಆಯ್ಕೆ ಮಾಡಲಾಯಿತು. ವಿಜೇತರಾದ ಐದು ಸ್ಪರ್ಧಾರ್ಥಿಗಳನ್ನು ಆಯ್ಕೆಮಾಡಿ ಪ್ರಮಾಣ ಪತ್ರದ ತೆಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಹಾಗೆಯೇ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಂಸನೀಯ ಪತ್ರವನ್ನು ವಿತರಿಸಲಾಯಿತು.