ಯಳಂದೂರು ಸಮೀಪದ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಕರುವನ್ನು ವೀಕ್ಷಿಸುತ್ತಿರುವ ಗ್ರಾಮಸ್ಥರು. 
ಚಾಮರಾಜನಗರ

ಇರಸವಾಡಿ ಗ್ರಾಮದಲ್ಲಿ ಚಿರತೆ ದಾಳಿಗೆ ಕರು ಬಲಿ

ಯಳಂದೂರು: ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಚಿರತೆ ದಾಳಿ ಮಾಡಿ ತಿಂದು ಹಾಕಿದೆ.
ಗ್ರಾಮದ ಉಪ್ಪಾರ ಬಡಾವಣೆಯ ನಿವಾಸಿ ರಂಗಸ್ವಾಮಿಶೆಟ್ಟಿ ಎಂಬುವರಿಗೆ ಸೇರಿದ ಕರು ಇದಾಗಿದೆ.
ತಮ್ಮ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಹಸು ಹಾಗೂ ಕರುವನ್ನು ಸಾಕಾಣಿಕೆ ಮಾಡುತ್ತಿದ್ದರು. ಸೋಮವಾರ ನಸುಕಿನಲ್ಲಿ ಕೊಟ್ಟಿಗೆಗೆ ಬಂದು ಕರುವನ್ನು ಅರ್ಧಂಬರ್ಧವಾಗಿ ತಿದ್ದು ಬಿಟ್ಟು ಹೋಗಿದೆ. ಬೆಳಗ್ಗೆ ಎದ್ದು ಕೊಟ್ಟಿಗೆಗೆ ಹೋಗಿ ನೋಡಿದಾಗ ಕರುವು ಮೃತಪಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇತ್ತಿಚೆಗೆ ಈ ಭಾಗದ ಸುತ್ತಮುತ್ತಲ್ಲಿನ ಗ್ರಾಮಗಳಾದ ಗಂಗವಾಡಿ, ಯರಗಂಬಳ್ಳಿ, ಹೊಮ್ಮ, ಅಂಬಳೆ, ಚಂಗಚಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಿದೆ. ಕಳೆದ ಹಲವು ದಿನಗಳಿಂದ ಗಂಗವಾಡಿ ಗ್ರಾಮದಲ್ಲಿ 5 ರಾಸುಗಳು ಮೃತಪಟ್ಟಿದ್ದವು ಈಗ ಮತ್ತೊಂದು ಕರು ಬಲಿಯಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.