ಯಳಂದೂರು ಪಟ್ಟಣದ ಕೆ.ಕೆ.ರಸ್ತೆಯಲ್ಲಿ ಕುಡಿಯುವ ನೀರಿಗೆ ಆಗಿರುವ ತೊಂದರೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಇಲ್ಲಿನ ವಾಸಿಗಳು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟಿಸಿದರು.
ಯಳಂದೂರು: ಪಟ್ಟಣದ 1ನೇ ವಾರ್ಡಿನ ವ್ಯಾಪ್ತಿಗೆ ಒಳಪಡುವ ಕೆ.ಕೆ. ರಸ್ತೆಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಪೈಪ್ ಒಡೆದು ಕಲುಷಿತ ನೀರು ಪೂರೈಕೆಯಾಗುತ್ತಿದ್ದು ಇಲ್ಲಿನ ವಾಸಿಗಳು ಕುಡಿಯುವ ನೀರಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ ಎಂದು ಸೋಮವಾರ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟಿಸಿದರು.
ಇಲ್ಲಿ ಕಳೆದ ಮೂರು ದಿನಗಳ ಹಿಂದೆ ಕುಡಿಯುವ ನೀರಿನ ಪೈಪ್ ಒಡೆದಿದೆ. ಇದರಿಂದ ಕಲುಷಿತ ಚರಂಡಿ ನೀರು ಸೇರಿದಂತೆ, ಕ್ರಿಮಿ-ಕೀಟಗಳು ನೀರಿನೊಂದಿಗೆ ಬಂದಿವೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಸಂಬಂಧಪಟ್ಟವರು ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಶುದ್ಧ ಕುಡಿಯುವ ನೀರಿಗಾಗಿ ಇವರು ದೂರದಿಂದ ನಿತ್ಯ ನೀರು ತರುವ ಪರಿಸ್ಥಿತಿ ಇದೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಆರೋಗ್ಯಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಪೈಪ್‌ನ ದುರಸ್ತಿ ಮಾಡಿಸಬೇಕು. ಇಲ್ಲಿನ ವಾಸಿಗಳ ಸಮಸ್ಯೆಯನ್ನು ನಿವಾರಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ಮಹದೇವಮ್ಮ, ಬಸವರಾಜು, ರಜಿನಿ, ದೇವಮ್ಮ, ನಾಗಣ್ಣ ಸೇರಿದಂತೆ ಅನೇಕರು ಒತ್ತಾಯಿಸಿದರು.