ಹನೂರಿನಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೋಮಶೇಖರ್, ಮುರುಡೇಶ್ವರಸ್ವಾಮಿ, ಜಸ್ಸಿಂಪಾಷ, ನಾಗೇಂದ್ರ ಇತರರು ಇದ್ದರು.
- ಒಡೆಯರಪಾಳ್ಯ ಸೋಮಶೇಖರ್ ಬಣ್ಣನೆ
- ಶ್ರದ್ಧಾಂಜಲಿ ಸಭೆ
ಹನೂರು: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಮಹಾಸಭಾದ ತಾಲೂಕು ಅಧ್ಯಕ್ಷ ಒಡೆಯರಪಾಳ್ಯ ಸೋಮಶೇಖರ್ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆ ಸೋಮವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶಾಸಕ, ಸಂಸದ ಹಾಗೂ ಸಚಿವರಾಗಿದ್ದ ಶಿವಶಂಕರಪ್ಪ ಅವರು ಹಿರಿಯ ರಾಜಕಾರಣಿಯಾಗಿದ್ದು, ನಾಡಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದು, ಜನಮನ್ನಣೆಗಳಿಸಿದ್ದರು. ಸರಳತೆಯ ಸ್ನೇಹಪರ ಜೀವಿಯಾಗಿದ್ದರು. ಬಡವರ ಕಷ್ಟಕ್ಕೆ ಯಾವಾಗಲೂ ಸ್ಪಂದಿಸುವ ಮಾನವೀಯತ ಇರುವ ನಾಯಕರಾಗಿದ್ದರು. ದಾವಣಗೆರೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಬಡ ಮಕ್ಕಳಿಗೆ ಆಶಾಕಿರಣವಾಗಿದ್ದರು. ದೂರದೃಷ್ಟಿಯೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಜತೆಗೆ ಸಮಾಜದ ಅಭಿವೃದ್ಧಿಗೆ ಇನ್ನಿಲ್ಲದ ಶ್ರಮ ವಹಿಸಿದ್ದರು. ಇವರ ಸೇವೆ ಇನ್ನಷ್ಟು ಅಗತ್ಯವಾಗಿತ್ತು ಎಂದರು.
ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಮುರುಡೇಶ್ವರಸ್ವಾಮಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಆರಂಭದಲ್ಲಿ ಪುರಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದು 6 ಬಾರಿ ಶಾಸಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇವರ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದ ಬಹುತೇಕ ವಿದ್ಯಾರ್ಥಿಗಳು ಉದ್ಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ. ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಜತೆಗೆ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಇವರ ಕೊಡುಗೆ ಅಪಾರ ಎಂದರು.
ಪಪಂ ಅಧ್ಯಕ್ಷೆ ಮುಮ್ತಾಜ್ ಬಾನು, ಸದಸ್ಯರಾದ ಹರೀಶ್‌ಕುಮಾರ್, ಗಿರೀಶ್, ಮಹಾಸಭಾದ ಜಿಲ್ಲಾ ನಿರ್ದೇಶಕ ಬಸವರಾಜಪ್ಪ, ಜಗದೀಶ್, ತಾಲೂಕು ನಿರ್ದೇಶಕ ವಿನೋದ್, ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ, ತಾಲೂಕು ಮುಸ್ಲಿಂ ಕಮಿಟಿ ಅಧ್ಯಕ್ಷ ಜಸ್ಸಿಂ ಪಾಷ, ಬಿಜೆಪಿ ಹನೂರು ಮಂಡಲಾಧ್ಯಕ್ಷ ವೃಷಭೇಂದ್ರಸ್ವಾಮಿ, ಮುಖಂಡರಾದ ನಾಗೇಂದ್ರ, ಕುಮಾರ್ ಇನ್ನಿತರರು ಇದ್ದರು.