ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದಲ್ಲಿ ಹಸುಗಳಿಗೆ ಕಾಲುಬಾಯಿ ಲಸಿಕೆ ನೀಡುತ್ತಿರುವುದು. ಈ ವೇಳೆ ಡಾ.ಮಂಜುನಾಥ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
- ಜಾನುವಾರುಗಳಿಗೆ ನೀಡಲಾಗುವ ಕಾಲುಬಾಯಿ ಲಸಿಕೆ
- ರಾಜ್ಯದಲ್ಲಿ ಚಾಮರಾಜನಗರಕ್ಕೆ 9ನೇ ಸ್ಥಾನ
- ಸಮಸ್ಯೆಗಳ ನಡುವೆ ಅಭಿಯಾನ
ಚಾಮರಾಜನಗರ : ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ಜ್ವರ ರೋಗ ನಿಯಂತ್ರಣಕ್ಕೆ ಹಮ್ಮಿಕೊಂಡಿರುವ ಕಾಲುಬಾಯಿ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆದಿದ್ದು, ಶೇ.92 ರಷ್ಟು ಲಸಿಕೆ ಪೂರ್ಣಗೊಂಡಿದೆ.
ಜಿಲ್ಲೆಯ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ 70,802 ಹಸು ಮತ್ತು ಎತ್ತುಗಳು, 2344 ಎಮ್ಮೆ ಮತ್ತು ಕೋಣಗಳು ಇದೆ. ಗುಂಡ್ಲುಪೇಟೆಯಲ್ಲಿ 73,329 ಹಸು ಮತ್ತು ಎತ್ತುಗಳು, 287 ಎಮ್ಮೆ ಮತ್ತು ಕೋಣ, ಕೊಳ್ಳೇಗಾಲದಲ್ಲಿ 30,224 ಹಸು ಮತ್ತು ಎತ್ತುಗಳು, 1842 ಎಮ್ಮೆ ಮತ್ತು ಕೋಣಗಳು, ಹನೂರು 65,392 ಹಸು ಮತ್ತು ಎತ್ತುಗಳು, 4174 ಎಮ್ಮೆ ಮತ್ತು ಕೋಣ ಹಾಗೂ ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ 9623 ಹಸು ಮತ್ತು ಎತ್ತುಗಳು, 1262 ಎಮ್ಮೆ ಮತ್ತು ಕೋಣಗಳನ್ನು ಒಳಗೊಂಡಂತೆ ಒಟ್ಟು 2.59 ಲಕ್ಷ ಜಾನುವಾರುಗಳು ಇದೆ.
ಈ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಮಾರಾಣಾಂತಿಕ ಕಾಲುಬಾಯಿ ಜ್ವರವನ್ನು ನಿಯಂತ್ರಣಾ ಮಾಡುವ ನಿಟ್ಟಿನಲ್ಲಿ ನ.3 ರಿಂದ ಡಿ.2 ರವರೆಗೆ ಕಾಲುಬಾಯಿ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ 120 ಕ್ಕಿಂತಲೂ ಹೆಚ್ಚು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ್ದು, ಈವರೆಗೆ ಶೇ.92 ರಷ್ಟು ಲಸಿಕೆ ಪೂರ್ಣಗೊಂಡಿದೆ. ಪ್ರಸ್ತುತ ಲಸಿಕಾ ಅಭಿಯಾನದ ಮಾಹಿತಿಯನ್ನು ಭಾರತ್ ಪಶುಧನ್ ಆ್ಯ್ನಲ್ಲೂ ದಾಖಲು ಮಾಡಲಾಗಿದೆ ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಮಂಜುನಾಥ್ ಅವರು ವಿಜಯವಾಣಿಗೆ ಮಾಹಿತಿ ನೀಡಿದರು.
ಜಿಲ್ಲೆಯ ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ಜ್ವರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನ.3 ರಿಂದ ಡಿ.2 ರವರೆಗೆ ಹಮ್ಮಿಕೊಂಡಿದ್ದ ಕಾಲುಬಾಯಿ ಲಸಿಕಾ ಅಭಿಯಾನದಲ್ಲಿ ಚಾಮರಾಜನಗರ ರಾಜ್ಯದಲ್ಲೇ 9ನೇ ಸ್ಥಾನದಲ್ಲಿದೆ. ಜಿಲ್ಲೆಯ ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ ಶೇ.90, ಗುಂಡ್ಲುಪೇಟೆ ಶೇ.92, ಯಳಂದೂರು ಶೇ.95, ಕೊಳ್ಳೇಗಾಲ ಶೇ.93 ಹಾಗೂ ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ಶೇ.90 ರಷ್ಟು ಲಸಿಕೆ ಪೂರ್ಣಗೊಂಡಿದೆ. ಉಳಿದಂತೆ ಲಸಿಕೆ ಪ್ರಾರಂಭವಾದ ದಿನಗಳಿಂದ ರೋಗದಿಂದ ಬಳಲುತ್ತಿದ್ದ, ಗರ್ಭಧರಿಸಿದ್ದ ಹಾಗೂ ಇನ್ನಿತರೆ ಸಮಸ್ಯೆಗಳಿಗೆ ತುತ್ತಾಗಿದ್ದ ಜಾನುವಾರುಗಳನ್ನು ಲಸಿಕೆಯಿಂದ ಕೈಬಿಡಲಾಗಿದೆ. ಅದರಲ್ಲೂ ಕೆಲವು ರೋಗದಿಂದ ಗುಣಮುಖವಾಗಿರುವ ಜಾನುವಾರುಗಳಿಗೆ ಈಗ ಲಸಿಕೆಯನ್ನು ನೀಡಲಾಗುತ್ತಿದೆ.
ಜಿಲ್ಲೆಯ ಜಾನುವಾರುಗಳಿಗೆ ಕಾಲುಬಾಯಿ ಲಸಿಕಾ ಅಭಿಯಾನ ಪ್ರಾರಂಭವಾದ ದಿನಗಳಿಂದಲೂ ಹಲವಾರು ಸಮಸ್ಯೆಗಳ ನಡುವೆ ಸಿಬ್ಬಂದಿಗಳು ಕಾರ್ಯವನ್ನು ನಿರ್ವಹಿಸಿದ್ದಾರೆ. ಅದರಲ್ಲೂ ಬಹುಮುಖ್ಯವಾಗಿ ಲಸಿಕಾ ಅಭಿಯಾನಕ್ಕೆ ಸಿಬ್ಬಂದಿಗಳ ಕೊರತೆ ಎದುರಾಗಿತ್ತು. ಸುಮಾರು 350 ಕ್ಕಿಂತಲೂ ಹೆಚ್ಚಿನ ಸಿಬ್ಬಂದಿಗಳು ಅಭಿಯಾನಕ್ಕೆ ಬೇಕಾಗಿತ್ತು. ಆದರೆ ಕೇವಲ 200 ಸಿಬ್ಬಂದಿಗಳು ಸೂಕ್ತ ಸಮಯಕ್ಕೆ ಲಸಿಕಾ ಅಭಿಯಾನವನ್ನು ಮುಗಿಸಿದ್ದಾರೆ. ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಾಗಿ ಜಾನುವಾರುಗಳನ್ನು ಸಾಕುತ್ತಿದ್ದು, ಅಲ್ಲಿನ ಜಾನುವಾರುಗಳಿಗೆ ಲಸಿಕೆ ನೀಡುವುದೇ ಸಿಬ್ಬಂದಿಗಳಿಗೆ ಸವಾಲಿನ ಕೆಲಸವಾಗಿತ್ತು. ಕೆಲವು ಕಡೆಗಳಲ್ಲಿ ರೈತರು ಲಸಿಕೆ ನೀಡಿದರೆ, ಜಾನುವಾರುಗಳಿಗೆ ಇನ್ನಿತರೆ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬ ದೃಷ್ಟಿಯಲ್ಲಿ ಲಸಿಕೆಯನ್ನು ತಿರಸ್ಕರಿಸುವವರು ಇದ್ದರು. ಅವರಿಗೆ ಮನವರಿಕೆ ಮಾಡಿ, ಲಸಿಕೆ ಹಾಕುವುದು ಸಿಬ್ಬಂದಿಗಳಿಗೆ ತಲೆನೋವಾಗಿತ್ತು. ಅದರಲ್ಲೂ ಕಾಡಂಚಿನ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಭಾರತ್ ಪಶುಧನ್ ಆ್ಯ್ನಲ್ಲಿ ದಾಖಲು ಮಾಡುವುದು ಸಮಸ್ಯೆಯಾಗಿತ್ತು. ಒಟ್ಟಾರೆಯಾಗಿ ಹಲವಾರು ಕೊರತೆಗಳ ನಡುವೆ ಕಾಲುಬಾಯಿ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆದಿದೆ.
ಮತ್ತೆ ಕಾಣಿಸಿಕೊಳ್ಳುತ್ತಿದೆ ಚರ್ಮಗಂಟು ರೋಗ:
ಜಿಲ್ಲೆಯಲ್ಲಿ ಡಿ.2 ರಂದು ಕಾಲುಬಾಯಿ ಲಸಿಕಾ ಅಭಿಯಾನ ಮುಕ್ತಾಯಗೊಳ್ಳಲಿದೆ. ಈ ನಡುವೆ ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ಚರ್ಮಗಂಟು ರೋಗ ಮತ್ತೆ ಕಾಣಿಸಿಕೊಳ್ಳುತ್ತಿರುವುದು ರೈತರಲ್ಲಿ ಆತಂಕ ಮನೆಮಾಡಿದೆ. ಕಳೆದ ತಿಂಗಳು ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಚರ್ಮಗಂಟು ರೋಗದಿಂದ 6 ಜಾನುವಾರುಗಳು ಮೃತಪಟ್ಟಿದ್ದವು. ಇದರ ಬೆನ್ನಲ್ಲೇ ಕೌದಳ್ಳಿ ಗ್ರಾಮದಲ್ಲಿ ಚರ್ಮಗಂಟು ರೋಗಕ್ಕೆ ಕರುವೊಂದು ಮೃತಪಟ್ಟಿದ್ದು, ರೈತರು ಸಮಸ್ಯೆ ಅನುಭವಿಸುವಂತಾಗಿದೆ. ಈಗಾಗಲೇ ಇಲಾಖೆಗೆ ಮಾಹಿತಿ ದೊರೆತಿದ್ದು, ಚರ್ಮಗಂಟು ರೋಗಕ್ಕೆ ಚಿಕಿತ್ಸೆ ಇದೆ. ಚರ್ಮಗಂಟು ರೋಗಕ್ಕೆ ಚಿಕಿತ್ಸೆ ಪಡೆದುಕೊಂಡ ಬಳಿಕ ರೈತರು ಜಾನುವಾರುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗಿದೆ ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಮಂಜುನಾಥ್ ತಿಳಿಸಿದರು.
ಜಿಲ್ಲೆಯಲ್ಲಿ ಕಾಲುಬಾಯಿ ಲಸಿಕಾ ಅಭಿಯಾನ ಶೇ.92 ರಷ್ಟು ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಚಾಮರಾಜನಗರ 9ನೇ ಸ್ಥಾನದಲ್ಲಿದೆ. ಮಾಹಿತಿಯನ್ನು ಭಾರತ್ ಪಶುಧನ್ ಆ್ಯಪ್‌ನಲ್ಲಿ ದಾಖಲು ಮಾಡಲಾಗಿದೆ. ಹನೂರು ಭಾಗದಲ್ಲಿ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ಇಲಾಖೆಯಿಂದ ಎಚ್ಚರಿಕೆ ವಹಿಸಲಾಗಿದೆ.
ಡಾ.ಮಂಜುನಾಥ್, ಉಪನಿರ್ದೇಶಕ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಚಾಮರಾಜನಗರ