ಹನೂರು ಸಮೀಪದ ಹುಬ್ಬೆಹುಣಸೆ ಹಳ್ಳದ ಬಳಿಯ ಪ್ರಕಾಶ್‌ನಾಯ್ಡು ಅವರ ಜಮೀನಿನ ಶೆಡ್‌ನಲ್ಲಿ ಹಸುಗಳನ್ನು ಸಾಕಾಣೆ ಮಾಡಿರುವುದು.
- ಜಿಲ್ಲೆಯಲ್ಲಿ ಹನೂರು ತಾಲೂಕು ಪ್ರಥಮ
- ಬೇಕಿದೆ ಮತ್ತಷ್ಟು ಉತ್ತೇಜನ
ಹನೂರು: ತಾಲೂಕಿನಲ್ಲಿ ಬಹುತೇಕ ರೈತರು ಕೃಷಿಯೊಂದಿಗೆ ಹೈನುಗಾರಿಕೆ ಅವಲಂಬಿಸಿದ್ದು, ನಿತ್ಯ 88 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುವುದರ ಹನೂರು ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
ಹನೂರು ಭಾಗದಲ್ಲಿನ ರೈತರ ಮುಖ್ಯ ಕಸುಬು ಕೃಷಿ. ಇದರಲ್ಲಿ ಮಳೆಯಾಶ್ರಿತ ಖುಷ್ಕಿ ಭೂಮಿ ಹಾಗೂ ನೀರಾವರಿ ಪ್ರದೇಶದಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಬಹುತೇಕ ರೈತರು ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದು, ಇದು ಸಣ್ಣ ರೈತರಿಗೆ ಕುಟುಂಬ ನಿರ್ವಹಣೆಗೆ ಸಹಕಾರಿಯಾದರೆ, ಇನ್ನುಳಿದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ತಾಲೂಕಿನಲ್ಲಿ ಪಶುಪಾಲನಾ ಇಲಾಖೆ ಮಾಹಿತಿ ಪ್ರಕಾರ 60 ಸಾವಿರ ದನಗಳು, 20,803 ಎಮ್ಮೆ, 21,039 ಕುರಿ ಹಾಗೂ 51 ಸಾವಿರ ಮೇಕೆಗಳನ್ನು ರೈತರು ಸಾಕಣೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯತ್ತ ಒಲವು ತೋರುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಪಶುಪಾಲನಾ ಇಲಾಖೆ ಹಾಗೂ ಚಾಮುಲ್ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ.
ಜಿಲ್ಲೆಯಲ್ಲಿಯೇ ಹನೂರು ಪ್ರಥಮ: ಚಾಮರಾಜನಗರ ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರಸ್ತುತ ಪ್ರತಿದಿನ ಸರಾಸರಿ 64,800 ಲೀಟರ್, ಗುಂಡ್ಲುಪೇಟೆ ತಾಲೂಕಿನಲ್ಲಿ 72,300 ಲೀ., ಕೊಳ್ಳೇಗಾಲದಲ್ಲಿ 39,900 ಲೀ. ಹಾಗೂ ಯಳಂದೂರು ತಾಲೂಕಿನಿಂದ 9,900 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹನೂರು ತಾಲೂಕಿನಲ್ಲಿ 18 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸೇರಿದಂತೆ ಒಟ್ಟು 93 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 6,065 ಹಾಲು ಉತ್ಪಾದಕರಿದ್ದಾರೆ. ಇವರಿಂದ ನಿತ್ಯ ಸರಾಸರಿ 88,200 ಲೀ. ಹಾಲು ಉತ್ಪಾದನೆಯಾಗುವುದರ ಮೂಲಕ ಜಿಲ್ಲೆಯಲ್ಲಿಯೇ ಹನೂರು ಪ್ರಥಮ ಸ್ಥಾನದಲ್ಲಿದೆ.
9 ಕಡೆಗಳಲ್ಲಿ ಡೇರಿ ಅಗತ್ಯವಿದೆ: ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಪೈಕಿ ಕಾಡಂಚಿನ ಗ್ರಾಪಂಗಳಾದ ದಿನ್ನಳ್ಳಿ, ಮಿಣ್ಯಂ, ಶೆಟ್ಟಳ್ಳಿ, ಕುರಟ್ಟಿ ಹೊಸೂರು, ಪೊನ್ನಾಚಿ, ಮ.ಬೆಟ್ಟ ಹಾಗೂ ಗೋಪಿನಾಥಂನಲ್ಲಿ ಡೇರಿ ಇಲ್ಲ. ಇದರಿಂದ ಈ ಭಾಗದ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಅರಣ್ಯ ಪ್ರದೇಶದಿಂದ ಕೂಡಿರುವ ಪಚ್ಚೆದೊಡ್ಡಿ ಗ್ರಾಮದಲ್ಲಿ ರೈತರು ಡೇರಿ ಸ್ಥಾಪನೆಗೆ ಮನವಿ ಮಾಡಿದ್ದಾರೆ. ಕೊಂಬುಡಿಕ್ಕಿ ಗ್ರಾಮಕ್ಕೂ ಡೇರಿ ಅಗತ್ಯವಾಗಿದೆ. ಈ ಗ್ರಾಮಗಳಲ್ಲೂ ಡೇರಿ ಸ್ಥಾಪನೆಯಾದರೆ ಈ ಭಾಗದಿಂದಲೂ ಹಾಲು ಉತ್ಪಾದನೆಯಾಗುವುದರ ಮೂಲಕ ಹಾಲಿನ ಪ್ರಮಾಣ ಇನ್ನಷ್ಟು ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಅಗತ್ಯ ಕ್ರಮ ವಹಿಸಬೇಕಾಗಿದೆ.
ಕಾಡಂಚಿನ ಗ್ರಾಮಗಳಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಪಶುಪಾಲನಾ ಇಲಾಖೆ ಸಹಕಾರದೊಂದಿಗೆ ತಾಲೂಕಿನ ದಿನ್ನಳ್ಳಿ ಹಾಗೂ ಕೊಂಬುಡಿಕ್ಕಿ ಗ್ರಾಮದ ರೈತರಿಗೆ ಮಿಶ್ರತಳಿ ಹಸುಗಳನ್ನು ವಿತರಿಸಿದೆ. ಇದರಿಂದ ರೈತರು ಹೈನುಗಾರಿಕೆಯಲ್ಲಿ ಆಸಕ್ತಿ ವಹಿಸಿದ್ದಾರೆ.
4 ಕಡೆಗಳಲ್ಲಿ ಆಸ್ಪತ್ರೆ ಅವಶ್ಯ
ಹನೂರು ತಾಲೂಕಿನಲ್ಲಿ ಕೇವಲ 12 ಪಶು ಆಸ್ಪತ್ರೆಗಳಿವೆ. ಇದರಿಂದ ಇಲಾಖೆಯ ಕಾರ್ಯಕಮಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಾಗೂ ಜಾನುವಾರುಗಳು ರೋಗಬಾಧೆಗೆ ಒಳಗಾದ ವೇಳೆ ಅಗತ್ಯ ಚಿಕಿತ್ಸೆ ನೀಡಲು ಪಶು ವೈದ್ಯರಿಗೆ ಕಷ್ಟಸಾಧ್ಯವಾಗಿದೆ. ಹಾಗಾಗಿ ಮಂಗಲ, ಕುರಟ್ಟಿ ಹೊಸೂರು, ಅಜ್ಜೀಪುರ ಹಾಗೂ ಪಿ.ಜಿ ಪಾಳ್ಯದಲ್ಲಿ ಪಶು ಆಸ್ಪತ್ರೆಗೆ ಅಗತ್ಯವಿದೆ. ಪಶು ಆಸ್ಪತ್ರೆಗಳಲ್ಲಿ ವೈದ್ಯ, ಸಿಬ್ಬಂದಿ ಕೊರತೆ ಇದೆ. ಈ ಸಮಸ್ಯೆ ಬಗೆಹರಿದರೆ ಹೈನುಗಾರಿಕೆಗೆ ಇನ್ನುಷ್ಟು ಒತ್ತು ನೀಡಬಹುದಾಗಿದೆ.
ರೈತರಿಗೆ ಮಾದರಿ: ಪಟ್ಟಣದ ಪ್ರಕಾಶ್‌ನಾಯ್ಡು ಅವರು ಹುಬ್ಬೆಹುಣಸೆ ಹಳ್ಳ ಸಮೀಪದಲ್ಲಿ ಜಮೀನು ಹೊಂದಿದ್ದು, ಹೈನುಗಾರಿಕೆಯನ್ನೇ ಮುಖ್ಯ ಕಸುಬಾಗಿಸಿಕೊಂಡಿದ್ದಾರೆ. ವಿವಿಧ ತಳಿಯ 350 ಹಸುಗಳನ್ನು ಸಾಕಣೆ ಮಾಡುತ್ತಿದ್ದು, ಪ್ರತಿ ದಿನ 2,200 ಲೀಟರ್ ಹಾಲು ಉತ್ಪಾದಿಸುವುದರ ಮೂಲಕ ಜಿಲ್ಲೆಗೆ ಪ್ರಥಮರು ಎನಿಸಿದ್ದಾರೆ. ಪ್ರತ್ಯೇಕ ಶೆಡ್ ನಿರ್ಮಿಸಿ ಹಸುಗಳನ್ನು ಆರೈಕೆ ಮಾಡುತ್ತಿದ್ದಾರೆ. ಆಧುನಿಕತೆಯನ್ನು ಅಳವಡಿಸಿಕೊಂಡಿದ್ದಾರೆ. 2024-25ನೇ ಸಾಲಿನಲ್ಲಿ 2.12 ಕೋಟಿ ಲೀ. ಹಾಲು ಉತ್ಪಾದಿಸುವುದರ ಮೂಲಕ ಮಾದರಿಯಾಗಿದ್ದಾರೆ. ಹನೂರಿನ ರಾಜೇಶ್‌ನಾಯ್ಡು ಎಂಬುವರು 60 ಹಸುಗಳನ್ನು ಸಾಕಣೆ ಮಾಡುತ್ತಿದ್ದು, ನಿತ್ಯ 620 ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ. ಇವರು ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಿರುವುದು ಇತರ ರೈತರಿಗೆ ಸ್ಫೂರ್ತಿಯಾಗಿದ್ದಾರೆ.
ಹಲವು ಸವಲತ್ತು: ಹನೂರು ಭಾಗದಲ್ಲಿ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿರುವುದರಿಂದ ಚಾಮುಲ್ ವಿಶೇಷ ಗಮನ ನೀಡಿದೆ. ಹಾಲು ಉತ್ಪಾದಕರಿಗೆ ಸಬ್ಸಿಡಿ ದರದಲ್ಲಿ 339 ಮೇವು ಕತ್ತರಿಸುವ ಯಂತ್ರ, 149 ಹಾಲು ಕರೆಯುವ ಯಂತ್ರವನ್ನು ನೀಡಿದೆ. ರೈತರಿಗೆ ವಿಮೆ, ಬಿತ್ತನೆ ಜೋಳ, ಪ್ರವಾಸ, ತರಬೇತಿಯನ್ನು ಕೈಗೊಳ್ಳಲಾಗುತ್ತಿದೆ. ರೈತರ ಮಕ್ಕಳಿಗೆ ವಿದ್ಯಾರ್ಥಿನಿಲಯದ ವ್ಯವಸ್ಥೆ ಸೇರಿದಂತೆ ಇತರ ಸವಲತ್ತು ನೀಡುವುದರ ಮೂಲಕ ಹೈನುಗಾರಿಕೆ ಉತ್ತೇಜನ ನೀಡಲಾಗುತ್ತಿದೆ.
ತಾಲೂಕಿನಲ್ಲಿ ಕಳೆದ 3 ವರ್ಷದಿಂದಲೂ ಸಮರ್ಪಕ ಮಳೆಯಾಗಿಲ್ಲ. ಇಲ್ಲಿನ ರೈತರು ಹೈನುಗಾರಿಕೆಗೆ ಹೆಚ್ಚಿನ ಒತ್ತನ್ನು ನೀಡಿರುವುದರ ಪರಿಣಾಮ ಹಾಲು ಉತ್ಪಾದನೆಯಲ್ಲಿ ಹನೂರು ಪ್ರಥಮ ಸ್ಥಾನದಲ್ಲಿದೆ. ತಾಲೂಕಿನ ಕೆಲವೆಡೆ ಡೇರಿ ಹಾಗೂ 4 ಕಡೆಗಳಲ್ಲಿ ಪಶು ಆಸ್ಪತ್ರೆ ಸ್ಥಾಪನೆಯಾದರೆ ಹೈನುಗಾರಿಕೆಗೆ ಇನ್ನಷ್ಟು ಹೆಚ್ಚಿನ ಒತ್ತನ್ನು ನೀಡಬಹುದಾಗಿದೆ.
>ಡಾ.ಸಿದ್ದರಾಜು ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ ಹನೂರು
ಹನೂರು ತಾಲೂಕಿನಲ್ಲಿ ಪ್ರತಿದಿನ ಸರಾಸರಿ 88 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಪ್ರಥಮ ಸ್ಥಾನದಲ್ಲಿದೆ. ಚಾಮುಲ್‌ನಿಂದ ಹಲವು ಸವಲತ್ತುಗಳನ್ನು ನೀಡುವುದರ ಮೂಲಕ ರೈತರಿಗೆ ಹೈನುಗಾರಿಕೆಯ ಬಗ್ಗೆ ಉತ್ತೇಜನ ನೀಡಲಾಗುತ್ತಿದೆ. ಡೇರಿ ಇಲ್ಲದ ಕಾಡಂಚಿನ ಗ್ರಾಮಗಳಲ್ಲಿ ಈಗಾಗಲೇ ಸಮೀಪದ ಡೇರಿಯಲ್ಲಿ ಹಾಲು ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಡೇರಿ ಸ್ಥಾಪನೆಗೆ ಕ್ರಮವಹಿಸಲಾಗುವುದು.
>ನಂಜುಂಡಸ್ವಾಮಿ ಅಧ್ಯಕ್ಷ, ಚಾಮುಲ್