ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಸೋಮೇಶ್ವರ ಕೆರೆಯಲ್ಲಿ ಭಾನುವಾರದಿಂದ ಆರಂಭಗೊಳ್ಳುವ ತೆಪ್ಪೋತ್ಸಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.
ಯಳಂದೂರು: ತಾಲೂಕಿನ ಬಿಳಿಗಿರಿರಂಗಸ್ವಾಮಿ ಬೆಟ್ಟದಲ್ಲಿ ಬ್ರಹ್ಮ ರಥೋತ್ಸವ ಮುಗಿದ ಒಂದು ತಿಂಗಳ ನಂತರ ನಡೆಯುವ ಪವಿತ್ರ ತೆಪ್ಪೋತ್ಸವಕ್ಕೆ ಭರದ ಸಿದ್ಧತೆಗಳ ನಡೆದಿವೆ.
ಪ್ರತಿ ವರ್ಷ ದೊಡ್ಡ ಜಾತ್ರೆ ಮುಗಿದ 1 ತಿಂಗಳ ನಂತರ ಮೇ 31 ರಿಂದ ಜೂ. 7ರವರಗೆ ರಂಗಪ್ಪನ ತೆಪ್ಪೋತ್ಸವ 7 ದಿನಗಳ ಕಾಲ ಜರುಗಲಿದೆ. ನಂತರ ಕೊನೇ ದಿನ ಮಾತ್ರ ಗಂಗಾಧರೇಶ್ವರ ದೇವರ ಉತ್ಸವ ನೆರವೇರಿಸುವ ಮೂಲಕ ಎಲ್ಲ ಉತ್ಸವಗಳಿಗೆ ನಾಂದಿ ಹಾಡಲಾಗುತ್ತದೆ. ಈ ಸಮಯದಲ್ಲಿ ಬುಡಕಟ್ಟು ಸಮುದಾಯಗಳ ಜನರು ದೇವರಿಗೆ ಮರದ ತೆಪ್ಪವನ್ನು ಸಿದ್ಧಪಡಿಸುವ ಮೂಲಕ ದೇವರ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಮೆರವಣಿಗೆ ಮಾಡಿಕೊಂಡು ಸೋಮೇಶ್ವರ ಕೆರೆಯಲ್ಲಿ 8 ದಿನಗಳ ಕಾಲ ವಿವಿಧ ವಿಶೇಷ ಪೂಜೆ, ಜತೆಗೆ ಗೊರುಕನ ನೃತ್ಯ ಮಾಡುವ ಮೂಲಕ ಉತ್ಸವಕ್ಕೆ ಸಾಂಸ್ಕೃತಿಕ ಮೆರಗು ನೀಡುವುದು ವಿಶೇಷವಾಗಿದೆ. ನೂರಾರು ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.
ಕಳೆದ ಮೂರು ದಿನಗಳಿಂದಲೂ ಮರದ ದೊಡ್ಡ ಕಂಬಗಳನ್ನು ಕಟ್ಟಿ ತೆಪ್ಪವನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ನಿತ್ಯ ಸಂಜೆ 5ಗಂಟೆಯ ಸಮಯದಿಂದ ಪ್ರಾರಂಭವಾಗುವ ಪವಿತ್ರ ತೆಪ್ಪೋತ್ಸವವನ್ನು ನೋಡಲು ತಾಲೂಕು ಸೇರಿದಂತೆ ಜಿಲ್ಲೆಯ ಸುತ್ತಮುತ್ತಲ್ಲಿನ ನೂರಾರು ಜನರು ಆಗಮಿಸುತ್ತಾರೆ ಎಂದು ದೇವಸ್ಥಾನದ ಇಒ ಸುರೇಶ್ ಮಾಹಿತಿ ನೀಡಿದರು.