ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶ 
ಚಾಮರಾಜನಗರ

5 ಸಾವಿರ ಎಕರೆ ಅರಣ್ಯ ಒತ್ತುವರಿ ತೆರವು ಬಾಕಿ

ಪ್ರಮುಖ ಮುಖ್ಯಾಂಶಗಳು

  • ಭಾಗಶಃ ಕಾಡು ಪ್ರದೇಶದಿಂದ ಕೂಡಿರುವ ಜಿಲ್ಲೆ ಚಾ.ನಗರ
  • ಕಾನನದ ಭೂಮಿ ಅತಿಕ್ರಮಣ ನಿವಾರಣೆ ಉಳಿಕೆ
ಚಾಮರಾಜನಗರ: ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಎಕರೆ ಕಾಡು ಭೂಮಿ ಒತ್ತುವರಿ ತೆರವು ಬಾಕಿ ಉಳಿದಿದೆ.
ರಾಜ್ಯ ಅರಣ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 1,20,491 ಪ್ರಕರಣಗಳಲ್ಲಿ 2,21,263 ಎಕರೆ, 4 ಗುಂಟೆ ಅರಣ್ಯ ಪ್ರದೇಶದ ಒತ್ತುವರಿಯನ್ನು ತೆರವು ಮಾಡಲು ಬಾಕಿ ಇದೆ. ಇದರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಒತ್ತುವರಿ ತೆರವು ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 2362 ಆಗಿವೆ. 5190 ಎಕರೆ, 223 ಗುಂಟೆ ಒತ್ತುವರಿ ತೆರವು ಬಾಕಿ ಇದೆ.
ತೆರವಿಗೆ ಏನು ಕ್ರಮ?: ಅರಣ್ಯ ಒತ್ತುವರಿ ಮಾಡಿರುವವರ ವಿರುದ್ಧ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದಡಿ ಪ್ರಕರಣ ದಾಖಲಿಸಲಾಗಿದೆ. ಒತ್ತುವರಿಯಾದ ಅರಣ್ಯ ಭೂಮಿಯನ್ನು ಸರ್ಕಾರದ ಪರ ಹಿಂಪಡೆಯಲು ನಿಯಮಾನುಸಾರ ಕರ್ನಾಟಕ ಅರಣ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಅತಿಕ್ರಮಣಗಳನ್ನು ಪತ್ತೆ ಹಚ್ಚಲು, ಅರಣ್ಯ ಇಲಾಖೆಯು ಉಪಗ್ರಹ ಕಣ್ಗಾವಲು ವ್ಯವಸ್ಥೆ(ಾರೆಸ್ಟ್ ಕವರ್ ಚೇಂಜ್ ಅಲರ್ಟ್ ಸಿಸ್ಟಮ್) ಎಂಬ ತಾಂತ್ರಿಕ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ರಾಜ್ಯ ಅರಣ್ಯ ಇಲಾಖೆ ತಿಳಿಸಿದೆ.
507.30 ಎಕರೆ ಒತ್ತುವರಿ ತೆರವು:
ಜಿಲ್ಲೆಯಲ್ಲಿ 2014ನೇ ಸಾಲಿನಿಂದ 94 ಪ್ರಕರಣಗಳಲ್ಲಿ 507.30 ಎಕರೆಯನ್ನು ಒತ್ತುವರಿ ತೆರವು ಮಾಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ 59 ಪ್ರಕರಣಗಳಲ್ಲಿ 235.64 ಎಕರೆ, ಮಂಡ್ಯದಲ್ಲಿ 58 ಪ್ರಕರಣಗಳಲ್ಲಿ 305.70 ಎಕರೆ, ಹಾಸನದಲ್ಲಿ 53 ಪ್ರಕರಣಗಳಲ್ಲಿ 214.56 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಈ ಜಿಲ್ಲೆಗಳಿಗೆ ಹೋಲಿಸಿದರೆ ಚಾಮರಾಜನಗರ ಜಿಲ್ಲೆಯಲ್ಲೇ ಅಧಿಕ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ತೆರವಾಗಿದೆ.
ಸಂಘರ್ಷಕ್ಕೆ ಒತ್ತುವರಿಯೂ ಕಾರಣ:
ಅರಣ್ಯ ಪ್ರದೇಶ ಒತ್ತುವರಿ ಭೂ ವ್ಯಾಜ್ಯವಾಗಿ ಮಾತ್ರ ಉಳಿದಿಲ್ಲ. ಇದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ. ಜಿಲ್ಲೆಯಲ್ಲಿ ಬಂಡೀಪುರ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮ ಅರಣ್ಯಗಳಿವೆ. ವನ್ಯಜೀವಿಗಳ ಸಂರಕ್ಷಣೆ ಉತ್ತಮವಾಗಿದೆ. ಇದರ ಪರಿಣಾಮವಾಗಿ ವನ್ಯಸಂಪತ್ತು ಮತ್ತು ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕಾಡು ಮಾತ್ರ ಇದ್ದಷ್ಟೇ ಇದೆ. ಅದರಲ್ಲೂ ಅರಣ್ಯ ಪ್ರದೇಶ ಒತ್ತುವರಿಯಾಗಿರುವುದು ಮತ್ತಷ್ಟು ಸ್ಥಳಾವಕಾಶವನ್ನು ಕಸಿದುಕೊಳ್ಳುವಂತೆ ಮಾಡಿದೆ. ಕಾಡುಪ್ರಾಣಿಗಳು ನಾಡಿನತ್ತ ಧಾವಿಸುವುದು ಹೆಚ್ಚಾಗುತ್ತಿದೆ. ಹೀಗಾಗಿ ಮಾನವ-ಪ್ರಾಣಿ ಸಂಘರ್ಷಕ್ಕೆ ಅರಣ್ಯ ಒತ್ತುವರಿಯೂ ಕಾರಣವಾಗುತ್ತದೆ.
"

2014ನೇ ಸಾಲಿನಿಂದ ಇಲ್ಲಿಯವರೆ 8424 ಪ್ರಕರಣಗಳಲ್ಲಿ 35098.40 ಎಕರೆ ಒತ್ತುವರಿಯಿಂದ ತೆರವುಗೊಳಿಸಿ ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಗಿದೆ. ಅರಣ್ಯ ಭೂಮಿ ಒತ್ತುವರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅತಿಕ್ರಮಣ ತೆರವಿಗೆ ತಂತ್ರಾಂಶ ಬಳಕೆ ಮಾಡಿಕೊಳ್ಳಲಾಗುತ್ತಿದೆ.

— ಈಶ್ವರ ಖಂಡ್ರೆ, ಅರಣ್ಯ ಸಚಿವ

"

ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿಯಾಗುತ್ತಿದೆ ಎನ್ನುವುದಕ್ಕಿಂತ ಭೂ ಕಬಳಕೆಯಾಗುತ್ತಿದೆ ಎಂದೇ ಹೇಳಬಹುದಾಗಿದೆ. ಭೂಮಿಯ ಎಲ್ಲ ದಾಖಲೆಗಳ ಪುನರ್‌ಪರಿಶೀಲನೆ ನಡೆಯಬೇಕಾಗಿದೆ. ಒಂದು ವೇಳೆ ದಾಖಲೆ ತಿದ್ದಿದ್ದರೆ ಅಂತಹವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಅರಣ್ಯ ಭೂಮಿ ಒತ್ತುವರಿ ತೆರವನ್ನು ಚುರುಕಾಗಿ ಮತ್ತು ಕಟ್ಟುನಿಟ್ಟಾಗಿ ಮಾಡಬೇಕೆಂದು ಒತ್ತಾಯಿಸುತ್ತೇನೆ.

— ಪುಣಜನೂರು ದೊರೆಸ್ವಾಮಿ, ಸಾಮಾಜಿಕ ಹೋರಾಟಗಾರ, ಚಾಮರಾಜನಗರ