ಹನೂರು ತಾಲೂಕಿನ ಮಹಾಲಿಂಗನಕಟ್ಟೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಅಂಕರಾಜು ಅಧ್ಯಕ್ಷತೆಯಲ್ಲಿ ನರೇಗಾ ಗ್ರಾಮಸಭೆ ಆಯೋಜಿಸಲಾಗಿತ್ತು. ರಾಜೀಬಾಯಿ, ನಾರಾಯಣ್, ಮಹದೇವಪ್ರಭು ಇತರರು ಇದ್ದರು.  
ಚಾಮರಾಜನಗರ

ಅಭಿವೃದ್ಧಿಗೆ ನರೇಗಾದಡಿ 41 ಲಕ್ಷ ರೂ. ಬಳಕೆ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಚಿಕ್ಕಮಾಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ 89 ಕಾಮಗಾರಿಗಳು ಪೂರ್ಣ
  • ತಾಲೂಕು ಸಂಯೋಜಕ ನಾರಾಯಣ್ ಮಾಹಿತಿ
  • ಸಾಮಾಜಿಕ ಲೆಕ್ಕ ತಪಾಸಣೆ, 15ನೇ ಹಣಕಾಸು ಯೋಜನೆ ಗ್ರಾಮಸಭೆ
ಹನೂರು: ಒಂದು ವರ್ಷದ ಅವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ(ನರೇಗಾ) ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 87 ಕಾಮಗಾರಿಗಳು ನಡೆದಿದ್ದು, 41 ಲಕ್ಷ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದು ನರೇಗಾ ತಾಲೂಕು ಸಂಯೋಜಕ ನಾರಾಯಣ್ ಹೇಳಿದರು.
ತಾಲೂಕಿನ ಮಹಾಲಿಂಗನಕಟ್ಟೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣಾ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯಲ್ಲಿ ಮಾತನಾಡಿದರು.
ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಕೆರೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಈ ಯೋಜನೆಯಡಿ ಗ್ರಾ.ಪಂ.ನಿಂದ ಒಂದು ವರ್ಷದ ಅವಧಿಯಲ್ಲಿ ವಸತಿ ಯೋಜನೆಗೆ ಅನುದಾನ, ಹಳ್ಳ, ಕಾಲುವೆ ಹೂಳೆತ್ತುವ ಕಾಮಗಾರಿ, ಶಾಲಾ ಶೌಚಗೃಹ ನಿರ್ಮಾಣ ಸೇರಿದಂತೆ 87 ಕಾಮಗಾರಿಗಳು ನಡೆದಿದ್ದು, ಕೂಲಿ ವೆಚ್ಚವಾಗಿ 41,53,318 ರೂ. ಅನುದಾನ ಖರ್ಚು ಮಾಡಲಾಗಿದ್ದು, ಸಾಮಗ್ರಿ ವೆಚ್ಚ ಬಿಡುಗಡೆಯಾಗಬೇಕಿದೆ. ನಡೆದಿರುವ ಕಾಮಗಾರಿಗಳನ್ನು ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದೆ. ಆದ್ದರಿಂದ ಆಕ್ಷೇಪಣೆಗಳಿದ್ದಲ್ಲಿ ಗ್ರಾಮಸ್ಥರು ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಕುಡಿಯ ನೀರಿನ ಸಮಸ್ಯೆ ಬಗೆಹರಿಸಿ:

ಕೊಟ್ಟಿಗೆ ನಿರ್ಮಿಸಿ ಹಲವು ವರ್ಷಗಳೇ ಕಳೆದಿದೆ. ಆದರೆ ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ. ಇದರಿಂದ ಅನ್ಯಾಯವಾಗಿದೆ ಎಂದು ಕೆಲವರು ದೂರಿದರು. ಲಕ್ಷ್ಮೀಬಾಯಿ, ಶಾಂತಿ ಬಾಯಿ ಹಾಗೂ ಕಮಲಾಬಾಯಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ನೀರಿಗಾಗಿ ಅಕ್ಕಪಕ್ಕದ ಜಮೀನಿನ ಪಂಪ್‌ಸೆಟ್‌ಗಳಿಗೆ ಅಲೆಯುವಂತಾಗಿದೆ. ಆದ್ದರಿಂದ ಕುಡಿವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು. ಈ ವೇಳೆ ಪಿಡಿಒ ಮಹದೇವಪ್ರಭು ಮಾತನಾಡಿ, ಕುಡಿಯುವ ನೀರು ಸಂಬಂಧ ಈಗಾಗಲೇ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅಗತ್ಯ ಕ್ರಮವಹಿಸಲಾಗಿದೆ. ಪಾವತಿಯಾಗದ ಶೌಚಗೃಹ ಬಿಲ್ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಬಳಿಕ ಸಭೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಖರ್ಚು ವೆಚ್ಚದ ಬಗ್ಗೆ ಮಾಹಿತಿ ತಿಳಿಸಲಾಯಿತು. ಗ್ರಾಪಂ ಅಧ್ಯಕ್ಷೆ ಪುಷ್ಪಾ ಅಂಕರಾಜು, ಸದಸ್ಯೆ ರಾಜೀಬಾಯಿ ಇತರರು ಇದ್ದರು.