ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ
ಕೊಳ್ಳೇಗಾಲ: ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ಆವರಣದಲ್ಲಿ ಕಳೆದ 18 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸುವರ್ಣ ಕರ್ನಾಟಕ ಭವನ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 40 ಲಕ್ಷ ರೂ. ಬಿಡುಗಡೆಯಾಗಿದೆ.
2008ರಲ್ಲಿ ಪ್ರಾದೇಶಿಕ ಮಟ್ಟದಲ್ಲಿ ನಾಲ್ಕು ಸುವರ್ಣ ಕರ್ನಾಟಕ ಭವನಗಳನ್ನು ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿತ್ತು. ಸದರಿ ಸುವರ್ಣ ಭವನ ನಿರ್ಮಾಣ ಕಾರ್ಯಕ್ಕಾಗಿ ಸರ್ಕಾರ ತಲಾ 1.25 ಕೋಟಿ ರೂ.ನಂತೆ ಒಟ್ಟು 5 ಕೋಟಿ ರೂ. ಮಂಜೂರು ಮಾಡಿತ್ತು. ಇದರಲ್ಲಿ ಮೈಸೂರು ವಿಭಾಗದಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಸುವರ್ಣ ಕರ್ನಾಟಕ ಭವನ ಕಾಮಗಾರಿಗೆ 1.25 ಕೋಟಿ ರೂ. ಬಿಡುಗಡೆ ಮಾಡಲು ಮಂಜೂರಾತಿ ನೀಡಲಾಗಿತ್ತು.
ನಂತರ, ಕೊಳ್ಳೇಗಾಲ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಸುವರ್ಣ ಕರ್ನಾಟಕ ಭವನ (ಗಡಿಭವನ) ಕಾಮಗಾರಿಯನ್ನು ಪೂರ್ಣಗೊಳಿಸಲು ಪರಿಷ್ಕೃತ ಅಂದಾಜು ಪಟ್ಟಿಯಂತೆ 1.86 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಅಂತೆಯೇ, ಈಗಾಗಲೇ ಈ ಕಾಮಗಾರಿಗೆ ಬಿಡುಗಡೆಯಾಗಿರುವ 1.25 ಕೋಟಿ ರೂ. ಹೊರತುಪಡಿಸಿ, ಬಾಕಿ ಇರುವ ಅನುದಾನ 61.49 ಲಕ್ಷ ರೂಪಾಯಿಯನ್ನು, ಪ್ರಸಕ್ತ ಸಾಲಿನಲ್ಲಿ 50 ಲಕ್ಷ ರೂಪಾಯಿಯನ್ನು ಚಾಮರಾಜನಗರ ಜಿಲ್ಲಾಧಿಕಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ಬಿಡುಗಡೆ ಮಾಡಲು ಸರ್ಕಾರದ ಮಂಜೂರಾತಿ ನೀಡಿದ್ದು, ಅದರಂತೆ, ಕೊಳ್ಳೇಗಾಲ ಪಟ್ಟಣದಲ್ಲಿ ಸುವರ್ಣ ಕನ್ನಡ ಭವನ ಮುಂದುವರಿದ ಕಾಮಗಾರಿಗೆ 80 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡುವ ಕುರಿತು ಆಡಳಿತಾತ್ಮಕ ಅನುಮೋದನೆಯೊಂದಿಗೆ, ಪ್ರಸಕ್ತ ಸಾಲಿನ ಕ್ರಿಯಾಯೋಜನೆ ಲೆಕ್ಕ ಶೀರ್ಷಿಕೆ 5475-00-115-0-02-386 ರಡಿ ಹೆಚ್ಚುವರಿ ಅನುದಾನ ಒದಗಿಸಿ ಚಾಮರಾಜನಗರ ಜಿಲ್ಲೆ ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.
ಈ ನಡುವೆ ಸದನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಅವರನ್ನು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪ್ರಶ್ನಿಸಿ, ಕೊಳ್ಳೇಗಾಲ ಪಟ್ಟಣದಲ್ಲಿ ಕಳೆದ 18 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸುವರ್ಣ ಕರ್ನಾಟಕ ಭವನ ನಿರ್ಮಾಣ ಅಭಿವೃದ್ಧಿಗೆ ಬಾಕಿ ಉಳಿದಿರುವ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಕಂತಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುವರ್ಣ ಕರ್ನಾಟಕ ಭವನ ಅಭಿವೃದ್ಧಿ ಕಾಮಗಾರಿಗೆ 40 ಲಕ್ಷ ರೂಪಾಯಿ ಬಿಡುಗಡೆಗೊಂಡಿದೆ. ಕಲಾವಿದರು, ಸಾಹಿತಿಗಳು ಹಾಗೂ ಸಂಘಟಕರು ಕ್ಷೇತ್ರ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.