ಮಸಣಿಗುಡಿಯಲ್ಲಿ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿ ಹಾಗೂ ವಾಹನ ಚಾಲಕರು ತಮ್ಮ ವಾಹನ ನಿಲ್ಲಿಸಿ ಬಂದ್ ಆಚರಿಸುತ್ತಿರುವುದು.
- ಪ್ರವಾಸಿ ವಾಹನಗಳಿಗೆ ನಿರ್ಬಂಧ ಹೇರಿರುವ ಹಿನ್ನೆಲೆ
ಗುಂಡ್ಲುಪೇಟೆ: ಊಟಿಗೆ ಹೋಗುವ ಪ್ರವಾಸಿ ವಾಹನಗಳ ಸಂಚಾರವನ್ನು ಒಂದು ವಾರದಿಂದ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ತಾಲೂಕಿಗೆ ಹೊಂದಿಕೊಂಡಿರುವ ತಮಿಳುನಾಡಿನ ಮಸಣಿಗುಡಿಯಲ್ಲಿ ವ್ಯಾಪಾರಸ್ಥರು ಹಾಗೂ ಪ್ರವಾಸಿ ವಾಹನ ಚಾಲಕರು ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಸಂಜೆವರೆಗೆ (36 ಗಂಟೆಗಳ ಕಾಲ) ಬಂದ್ ಆಚರಿಸುತ್ತಿದ್ದಾರೆ.
ಕಲ್ಲಟ್ಟಿ ಘಾಟ್‌ನಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತವೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಈ ಮಾರ್ಗದಲ್ಲಿ ಊಟಿಗೆ ಹೋಗುತ್ತಿದ್ದ ಪ್ರವಾಸಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ರಾಜ್ಯದ ಮಾರ್ಗವಾಗಿ ಊಟಿಗೆ ಹೋಗುವ ಪ್ರವಾಸಿಗರು ಗೂಡಲೂರು ಮಾರ್ಗವಾಗಿ ಬಳಸುದಾರಿಯನ್ನು ಬಳಸುವ ಬದಲು ಮಸಣಿಗುಡಿ ಕಲ್ಲಟ್ಟಿ ಘಾಟ್ ಮಾರ್ಗವಾಗಿ ಹೋಗಿಬರುತ್ತಿದ್ದರು. ಇದರಿಂದ ಅವರ ಪ್ರಯಾಣ ಸಮಯ ಉಳಿತಾಯವಾಗುತ್ತಿತ್ತು, 35 ಕಿಲೋಮೀಟರ್ ಅಂತರ ಕಡಿಮೆಯಾಗುತ್ತಿತ್ತು. ಜತೆಗೆ ಘಟ್ಟ ಪ್ರದೇಶದಲ್ಲಿನ ಸುಂದರ ಪ್ರಕೃತಿ ಸೊಬಗನ್ನು ಸವಿಯುತ್ತಿದ್ದರು. ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಪ್ರವಾಸಿಗರಿಂದ ವ್ಯಾಪಾರ, ವಹಿವಾಟು ಚೆನ್ನಾಗಿ ನಡೆಯುತ್ತಿತ್ತು.
ಕಲ್ಲಟ್ಟಿಗೆ ಹೋಗುವ ಮೊದಲು ಮತ್ತು ಅಲ್ಲಿಂದ ವಾಪಸಾಗುವ ಪ್ರವಾಸಿಗರು ಮೋಯಾರ್ ಮುಂತಾದ ಪ್ರವಾಸಿ ತಾಣಗಳಿಗೆ ಹೋಗುವ ಪ್ರಯಾಣಿಕರು ಮಸಣಿಗುಡಿಯನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದರಿಂದ ವ್ಯಾಪಾರಿಗಳು ಹಾಗೂ ವಾಹನಗಳ ಚಾಲಕರಿಗೆ ಹೆಚ್ಚಿನ ವ್ಯವಹಾರವಾಗುತ್ತಿದ್ದ ಪರಿಣಾಮ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿತ್ತು.
ಆದರೆ ಇತ್ತೀಚೆಗೆ ಸರ್ಕಾರ ಘಟ್ಟದ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ ಎಂಬ ನೆಪದಿಂದ ರಾಜ್ಯದಿಂದ ಊಟಿಯತ್ತ ಹೋಗುವ ವಾಹನಗಳನ್ನು ತೆಪ್ಪಕ್ಕಾಡಿನ ಚೆಕ್‌ಪೋಸ್ಟ್‌ನಲ್ಲಿ ಮಸಣಿಗುಡಿಯತ್ತ ಹೋಗದಂತೆ ನಿರ್ಬಂಧಿಸಿ ಗೂಡಲೂರಿನ ಮಾರ್ಗವಾಗಿ ಕಳಿಸುತ್ತಿದ್ದಾರೆ. ಪರಿಣಾಮ ಒಂದು ವಾರದಿಂದ ಪ್ರವಾಸಿಗಳು ಬಾರದೆ ಮಸಣಿಗುಡಿಯಲ್ಲಿ ಹೋಟೆಲ್, ವಾಹನಗಳು ಸೇರಿದಂತೆ ಪ್ರವಾಸೋದ್ಯಮವೇ ಬಂದ್ ಆಗಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದವರಿಗೆ ತೀವ್ರ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸರ್ಕಾರ ಹಿಂದಿನಂತೆ ಊಟಿಗೆ ಹೋಗುವ ಪ್ರವಾಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಶನಿವಾರ ಸಂಜೆ 6 ಗಂಟೆವರೆಗೂ ಬಂದ್ ಮುಂದುವರಿಸುತ್ತಿದ್ದಾರೆ.