ಕೊಳ್ಳೇಗಾಲ ತಾಲೂಕಿನ ಜಾಗೇರಿ ಹಳೇ ಕೋಟೆ ಅರಣ್ಯ ಪ್ರದೇಶದಲ್ಲಿ ಮೇಕೆಗಳು ಸತ್ತು ಬಿದ್ದಿರುವುದನ್ನು ಕೊಳ್ಳೇಗಾಲ ಬಫರ್ ವಲಯದ ಆರ್‌ಎಫ್‌ಒ ರವಿಕುಮಾರ್ ಭೇಟಿ ಮಾಡಿ ಪರಿಶೀಲಿಸಿದರು.
ಕೊಳ್ಳೇಗಾಲ: ತಾಲೂಕಿನ ಜಾಗೇರಿ ಹಳೇ ಕೋಟೆ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ 11 ಮೇಕೆಗಳು ಶನಿವಾರ ಮೃತಪಟ್ಟಿವೆ.
ಹಳೇ ಕೋಟೆ ನಿವಾಸಿ ಫ್ರಾನ್ಸಿಸ್ ಎಂಬುವರ ಮೇಕೆಗಳು ಇದಾಗಿದ್ದು, ಎಂದಿನಂತೆ ಮೇಯಲು ಬಿಟ್ಟಿದ್ದ ಮೇಕೆಗಳು ಅರಣ್ಯ ವ್ಯಾಪ್ತಿಗೆ ಸೇರಿದ ಹಳ್ಳವೊಂದರ ಬಳಿ ತೆರಳಿದೆ. ಸಂಜೆ ಹೊತ್ತಿನಲ್ಲಿ ಮೇಕೆಗಳು ಸತ್ತು ಬಿದ್ದಿದ್ದು ಇದನ್ನು ನೋಡಿದ ಫ್ರಾನ್ಸಿಸ್ ಅವರ ಮಗ ಗಾಬರಿಗೊಂಡು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಈ ಬಗ್ಗೆ ವಿಚಾರ ತಿಳಿದ ಕೊಳ್ಳೇಗಾಲ ಬಫರ್ ವಲಯದ ಆರ್‌ಎಫ್‌ಒ ರವಿಕುಮಾರ್ ಮತ್ತು ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಮೇಕೆ ಮರಿಗಳು ಸತ್ತು ಬಿದ್ದಿದ್ದ ಸ್ಥಳದಲ್ಲಿ ಕಬ್ಬಿಣದ ಬಾಂಡಲಿ ದೊರೆತಿದ್ದು, ಬಾಂಡಲಿ ಪಕ್ಕದಲ್ಲಿ ಯೂರಿಯಾ ಬಿದ್ದಿರುವುದು ಕಂಡು ಬಂದಿದೆ. ಮೇಲ್ನೋಟಕ್ಕೆ ಕಿಡಿಗೇಡಿಗಳು ಬಾಂಡಲಿಯಲ್ಲಿ ಇಟ್ಟಿದ್ದ ಯೂರಿಯಾ ಮಿಶ್ರಿತ ನೀರನ್ನು ಮೇಕೆಗಳು ಕುಡಿದು ಸತ್ತಿರಬಹುದು ಎಂದು ಶಂಕಿಸಲಾಗಿದೆ. ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಬಂದ ಬಳಿಕ ಮೇಕೆಗಳ ಸಾವಿಗೆ ಕಾರಣ ನಿಖರವಾಗಿ ತಿಳಿಯಲಿದೆ. ಈ ಸಂಬಂಧ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದೇವೆ. ಎಂದು ಕೊಳ್ಳೇಗಾಲ ಬಫರ್ ವಲಯದ ಆರ್‌ಎಫ್‌ಒ ರವಿಕುಮಾರ್ ತಿಳಿಸಿದ್ದಾರೆ.