ಯಳಂದೂರು: ಪರಿಸರದ ಸೂಕ್ಷ್ಮತೆ ಅರಿತು ಇದನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಎಲ್ಲರೂ ಅರಿಯಬೇಕು ಎಂದು ಸಿವಿಲ್ ನ್ಯಾಯಾಧೀಶ ಎನ್. ಶರತ್‌ಚಂದ್ರ ಕರೆ ನೀಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಅಂಗವಾಗಿ ಗಿಡ ನೆಟ್ಟು ಮಾತನಾಡಿದರು. ಪರಿಸರ ಕಾಳಜಿ ನಮ್ಮ ಅಸ್ಮಿತೆಯಾಗಬೇಕು. ನಮ್ಮ ಮನೆ, ಕಚೇರಿ, ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು. ಕೇರಳದಲ್ಲಿ ಆನೆಯನ್ನು ಕೊಂದ ಮನುಷ್ಯನಲ್ಲಿ ವಿಕೃತ ಮನಸ್ಸಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಎಲ್ಲ ಜೀವಿಗಳು ಜೀವವೈವಿದ್ಯತೆಯ ಸಂಕೇತವಾಗಿದೆ. ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ಪ್ರತಿಯೊಬ್ಬರೂ ಗಿಡ ನೆಡಬೇಕು. ನೆಡದಿದ್ದರೂ ಇದನ್ನು ನಾಶ ಮಾಡುವ ಕೆಲಸ ಮಾಡಬಾರದು ಎಂದರು.
92 ಸಾವಿರ ಗಿಡ ನೀಡಲು ಯೋಜನೆ:
ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿ ಮಾತನಾಡಿ, ಈ ವರ್ಷ 92 ಸಾವಿರ ಗಿಡಗಳನ್ನು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ನೀಡಲು ಇಲಾಖೆ ಸಿದ್ಧತೆ ನಡೆಸಿದೆ. ಇದರೊಂದಿಗೆ ಒಂದು ಗ್ರಾಮ ಪಂಚಾಯಿತಿಗೆ ಒಂದು ಸಾವಿರ ಗಿಡದಂತೆ 15 ಸಾವಿರ ಗಿಡಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈಗಾಗಲೇ 6 ಸಾವಿರ ಸಸಿಗಳನ್ನು ನೆಡಲಾಗಿದೆ. ರಸ್ತೆ ಬದಿಯಲ್ಲಿ 7 ಕಿ.ಮಿ. ವ್ಯಾಪ್ತಿಯಲ್ಲಿ 2,100 ಗಿಡಗಳನ್ನು ನೆಡಲಾಗಿದೆ. ನರೇಗಾ ಯೋಜನೆಯಡಿಯಲ್ಲಿ ಪ್ರತಿ ಎಕರೆಗೆ 150 ಸಸಿ ನೀಡಲಾಗುವುದು. ಇದರೊಂದಿಗೆ ಹೆಕ್ಟೇರ್‌ಗೆ 25 ಸಾವಿರ ರೂ. ಪ್ರೋತ್ಸಾಹಧನವನ್ನು ನೀಡಲಾಗುವುದು. ನಮ್ಮಲ್ಲಿ ಹೆಬ್ಬೇವು, ತೇಗ, ಶ್ರೀಗಂಧ, ರಕ್ತಚಂದನ, ಬಾದಾಮಿ, ಕಹಿಬೇವು ಗಿಡಗಳಿದ್ದು ರೈತರು, ಸಂಘಸಂಸ್ಥೆಗಳು, ಸಾರ್ವಜನಿಕರು ಅಗತ್ಯ ದಾಖಲಾತಿ ನೀಡಿ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಮೆಳ್ಳಹಳ್ಳಿ ಗೇಟ್ ಬಳಿಯ ಆದರ್ಶ ಶಾಲೆ ಆವರಣ, ನ್ಯಾಯಾಲಯದ ಆವರಣ ಪೊಲೀಸ್ ಠಾಣೆ ವುುಂಭಾಗದಲ್ಲಿ ಗಿಡಗಳನ್ನು ನೆಡಲಾಯಿತು. ತಾಪಂ ಇಒ ಬಿ.ಎಸ್. ರಾಜು, ಅರಣ್ಯ ಇಲಾಖೆಯ ಸಿಬ್ಬಂದಿ ರಾಜೇಂದ್ರ, ನಾಗರಾಜು, ವಕೀಲರ ಸಂಘದ ಸಿ. ಮಹದೇವಸ್ವಾಮಿ, ಕೆಸ್ತೂರು ಮಾದೇಶ್, ಸಿ. ಸಿದ್ದರಾಜು, ಶಶಿಧರ್ ಸೇರಿದಂತೆ ಹಲವರು ಹಾಜರಿದ್ದರು.