ಚಾಮರಾಜನಗರ: ನಗರದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಫಲಾನುಭವಿಯೊಬ್ಬರಿಗೆ ಶುಕ್ರವಾರ ಕಳಪೆ ತೊಗರಿಬೇಳೆ ವಿತರಣೆ ಮಾಡಲಾಗಿತ್ತು.
ಗುಂಡ್ಲುಪೇಟೆ ವೃತ್ತದ ಸಮೀಪದಲ್ಲಿರುವ ಕೆಂಡಗಣ್ಣ ಸ್ವಾಮಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದ ನಗರದ 8ನೇ ವಾರ್ಡ್ ನಿವಾಸಿ ಸ್ವಾಮಿ ಅವರಿಗೆ ಹುಳು ಮಿಶ್ರಿತ ತೊಗರಿಬೇಳೆಯನ್ನು ನೀಡಲಾಗಿತ್ತು. ಕಳಪೆ ಬೇಳೆ ವಿತರಣೆ ಮಾಡಿರುವುದನ್ನು ಪ್ರಶ್ನಿಸಿದಾಗ ಸರ್ಕಾರದಿಂದ ನೀಡುವ ಬೇಳೆಯನ್ನು ನಾವು ಜನರಿಗೆ ನೀಡುತ್ತಿದ್ದೇವೆ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಪಡಿತರ ಕಾರ್ಡ್‌ದಾರ ಸ್ವಾಮಿ ವಿಜಯವಾಣಿಗೆ ತಿಳಿಸಿದರು.
ಈ ಸಂಬಂಧ ಆಹಾರ ಇಲಾಖೆಯ ಪ್ರಭಾರ ಉಪನಿರ್ದೇಶಕ ರವಿಕುಮಾರ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ತೊಗರಿ ಬೇಳೆ ದಾಸ್ತಾನು ಮಾಡಿರುವ ಗೋದಾಮಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಕಳೆದ ಬಾರಿ ಕೇಂದ್ರ ಸರ್ಕಾರ ನೀಡಿದ್ದ ಕಳಪೆ ಬೇಳೆಯನ್ನು ಮರಳಿಸುವುದಾಗಿ ವಿಜಯವಾಣಿಗೆ ತಿಳಿಸಿದರು.