ಎಸ್. ಲಿಂಗರಾಜು ಮಂಗಲ ಹನೂರು
ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ಖಾಸಗಿ ಬಸ್‌ಗಳು ರಸ್ತೆಗಿಳಿದ ಹಿನ್ನೆಲೆ ಒಂದು ಕಡೆ ಜನರು ಸಂತಸ ವ್ಯಕ್ತಪಡಿಸಿದರೆ ಮತ್ತೊಂದು ಕಡೆ ಪಟ್ಟಣಕ್ಕೆ ಆಗಮಿಸಿದ ಜನ ಬಸ್ಸಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಲಾಕ್‌ಡೌನ್ ಹಿನ್ನೆಲೆ ಮಾರ್ಚ್‌ನಿಂದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ತಾಲೂಕು ವ್ಯಾಪ್ತಿಯ ಜನರು ಬೈಕ್ ಹಾಗೂ ಕಾರಿನ ಮೂಲಕ ಪಟ್ಟಣಕ್ಕೆ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರಲ್ಲದೇ ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಊರುಗಳಿಗೆ ವಾಪಾಸ್ಸಾಗುತ್ತಿದ್ದರು. ರೈತರು ಸಹ ಗೂಡ್ಸ್ ವಾಹನದ ಮೂಲಕ ತರಕಾರಿ ಹಾಗೂ ಇನ್ನಿತರೆ ದವಸ ಧಾನ್ಯಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಪರಿಣಾಮ ತುಂಬಾ ತೊಂದರೆ ಅನುಭವಿಸುತ್ತಿದ್ದರು. ಸರ್ಕಾರ 15 ದಿನದ ಹಿಂದೆ ರಾಜ್ಯಾದ್ಯಂತ ಸರ್ಕಾರಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು. ಈ ದಿಸೆಯಲ್ಲಿ ಹನೂರು ಭಾಗದಲ್ಲಿ ಬೆರಳೆಣಿಕೆಯಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲು ಆರಂಭಿಸಿದವು. ಆದರೂ ಕರೊನಾ ಸೋಂಕಿನ ಭಯದಿಂದ ಜನರು ಬಸ್‌ನಲ್ಲಿ ಪ್ರಯಾಣಿಸುತ್ತಿರಲಿಲ್ಲ. ಪರಿಣಾಮ ಒಂದು ಬಸ್‌ನಲ್ಲಿ 20ಕ್ಕಿಂತಲೂ ಕಡಿಮೆ ಜನರು ಸಂಚರಿಸುತ್ತಿದ್ದರು.
ಸೋಮವಾರ ಖಾಸಗಿ ಬಸ್‌ಗಳ ಸಂಚಾರಕ್ಕೆ ಸರ್ಕಾರ ಅವಕಾಶ ನೀಡಿದ ಹಿನ್ನೆಲೆ ಪಟ್ಟಣ ಸೇರಿದಂತೆ ತಾಲೂಕಿನ ಹೂಗ್ಯಂ, ರಾಮಾಪುರ, ಕೌದಳ್ಳಿ, ಒಡೆಯರಪಾಳ್ಯ ಹಾಗೂ ಈ ಭಾಗದ ಇನ್ನಿತರೆ ಕಡೆಗಳಿಗೆ ಬೆಳಗ್ಗೆ 6ರಿಂದಲೇ ಖಾಸಗಿ ಬಸ್‌ಗಳು ಸಂಚರಿಸಿದವು. ಇದರಿಂದ ಜನರು ಖುಷಿ ವ್ಯಕ್ತಪಡಿಸಿದರಲ್ಲದೇ ಎಂದಿನಂತೆ ಖಾಸಗಿ ಬಸ್ ಸಂಚಾರ ಇರುತ್ತದೆ ಎಂದು ತಿಳಿದು ಕೆಲಸ ಕಾರ್ಯಗಳ ನಿಮಿತ್ತ ಹನೂರು ಪಟ್ಟಣಕ್ಕೆ ಆಗಮಿಸಿಬಿಟ್ಟಿದ್ದ್ದರು. ಆದರೆ, ಬೆರಳೆಣಿಕೆಯಷ್ಟು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಇದರಿಂದ ಪಟ್ಟಣಕ್ಕೆ ಆಗಮಿಸಿದ ಜನ ತಮ್ಮ ಗ್ರಾಮಗಳಿಗೆ ತೆರಳಲು ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಗಂಟೆಗಟ್ಟಲೇ ಕಾದು ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಜನ ತುಂಬಾ ತೊಂದರೆ ಅನುಭವಿಸಿದರು.
ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆಯು ಇಲ್ಲ: ತಾಲೂಕಿನಲ್ಲಿ ಸಂಚರಿಸಿದ ಖಾಸಗಿ ಬಸ್‌ಗಳಲ್ಲಿ ಬಹುತೇಕ ಜನರು ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ಧರಿಸುವಂತೆ ನಿರ್ವಾಹಕರಾಗಲಿ ಹಾಗೂ ಚಾಲಕರಾಗಲೀ ಸೂಚನೆ ನೀಡುತ್ತಿರಲಿಲ್ಲ. ಇವರು ಬಸ್ ಹತ್ತುವುದನ್ನಷ್ಟೇ ಕಾಯುತ್ತಿದ್ದರು. ಅಲ್ಲದೆ, ಯಾವುದೇ ಖಾಸಗಿ ಬಸ್‌ನಲ್ಲಿ ಸ್ಯಾನಿಟೈಸರ್ ಬಳಕೆಯನ್ನು ಮಾಡುತ್ತಿರಲಿಲ್ಲ. ಇದರಿಂದ ಸರ್ಕಾರದ ನಿಯಮವನ್ನು ಗಾಳಿಗೆ ತೂರಲಾಗಿತ್ತು. ಹೀಗಾಗಿ ಸಾರ್ವಜನಿಕರಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಬಸ್ ಮಾಲೀಕರು ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಒತ್ತಾಯಿಸಲಾಗಿದೆ.
ಜನರ ಸಂಚಾರದಲ್ಲಿ ಹೆಚ್ಚಳ:
ಖಾಸಗಿ ಬಸ್ ಸಂಚಾರದ ಹಿನ್ನೆಲೆ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಇದ್ದ ತಾಲೂಕಿನ ಹೆಚ್ಚಿನ ಜನರು ಪಟ್ಟಣಕ್ಕೆ ಆಗಮಿಸಿದ್ದರು. ಇದರಿಂದ ಸೋಮವಾರ ಜನರ ಸಂಚಾರ ಪಟ್ಟಣದಲ್ಲಿ ಹೆಚ್ಚಾಗಿಯೇ ಇತ್ತು. ಈ ದಿಸೆಯಲ್ಲಿ ಪಟ್ಟಣದ ಎಲ್ಲೆಂದರಲ್ಲೂ ಜನಜಂಗುಳಿ ಇತ್ತಲ್ಲದೇ ಬಟ್ಟೆ, ದಿನಸಿ, ಹಣ್ಣಿನ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಬಲು ಜೋರಾಗಿಯೇ ನಡೆಯಿತು. ಇದರಿಂದ ಕಳೆದ 2 ತಿಂಗಳಿನಿಂದ ವ್ಯಾಪಾರವಿಲ್ಲದೆ ನಲುಗಿದ್ದ ಅಂಗಡಿ ಮಾಲೀಕರಿಗೆ ಕೊಂಚ ಖುಷಿ ತಂದಿತು.