ಚಾಮರಾಜನಗರ: ದಕ್ಷಿಣ ಕನ್ನಡದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಗುಂಡ್ಲುಪೇಟೆಯ ಕಾರ್ಯಕರ್ತರ ಜವಾಬ್ದಾರಿ ವಿಮುಕ್ತಿ ಘೋಷಣೆ ಬಳಿಕ ಜಿಲ್ಲಾ ಕಮಿಟಿಯ ಕೆಲವು ಸದಸ್ಯರು ಪಕ್ಷದ ಜವಾಬ್ದಾರಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ ಜಿಲ್ಲಾ ಉಪಾಧ್ಯಕ್ಷ ವೃಷಭೇಂದ್ರಪ್ಪ ಅವರಿಗೆ ನಗರಸಭೆ ಸದಸ್ಯರು ಮತ್ತು ವಿವಿಧ ಸಮಿತಿಗಳ ಸದಸ್ಯರು ಪಕ್ಷ ತಮಗೆ ನೀಡಿದ್ದ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಎಪಿಎಂಸಿ ಅಧ್ಯಕ್ಷ, ನಗರಸಭೆ ಸದಸ್ಯ ಮನೋಜ್‌ಪಟೇಲ್ ಸಹಕಾರ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸ್ಥಾನಕ್ಕೆ, ಮತ್ತೋರ್ವ ನಗರಸಭೆ ಸದಸ್ಯ ಸಿ.ಎಂ.ಶಿವರಾಜು ನಗರ ಮಂಡಲ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತು ಜಿಲ್ಲಾ ಆರೋಗ್ಯ ಸಮಿತಿಯ ಸುಂದರ್‌ರಾಜು, ನಗರಸಭೆ ನಾಮನಿರ್ದೇಶಕ ಸದಸ್ಯ ಆರ್.ಎಲ್.ನಾಗೇಂದ್ರ (ಬಾಬು),ಎಸ್ಟಿ ಮೋರ್ಚಾ ಟೌನ್ ಅಧ್ಯಕ್ಷ ಚಂದ್ರಶೇಖರ್, ಸುದರ್ಶನ್ ಆಳ್ವಾ, ಆರಾಧನ ಸಮಿತಿ ನಿರ್ದೇಶಕ ರಮೇಶ್ ನಾಯಕ, ಯುವ ಮೋರ್ಚಾ ಕಾರ್ಯದರ್ಶಿ ಅಶ್ವಿನ್ ರಾಜೀನಾಮೆ ಸಲ್ಲಿಸಿದ್ದಾರೆ.