ಜಿಲ್ಲೆ

ನಕ್ಷತ್ರ ಆಮೆ ಸಾಗಿಸುತ್ತಿದ್ದ ಮೂವರ ಬಂಧನ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಮಂಗಲ ಸಮೀಪದ ಹುಲುಸುಗುಡ್ಡೆಯ ಬಳಿ ಬುಧವಾರ ಎರಡು ಜೀವಂತ ನಕ್ಷತ್ರ ಆಮೆಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಮೂವರನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಗುಂಡಿಮಾಳ ಗ್ರಾಮದ ಪ್ರಕಾಶ್ (38), ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾಗನೂರು ಗ್ರಾಮದ ನಾಗೇಂದ್ರಸ್ವಾಮಿ ಆಲಿಯಾಸ್ ಸುರೇಶ್ (45) ಹಾಗೂ ರಾಗಿಬೊಮ್ಮನಹಳ್ಳಿ ಗ್ರಾಮದ ನಾಗರಾಜು (54) ಬಂಧಿತರು. ಆರೋಪಿಗಳಿಂದ ಎರಡು ನಕ್ಷತ್ರ ಆಮೆಗಳು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಈ ಮೂವರು ಬುಧವಾರ ಬೆಳಗ್ಗೆ ಮಾರಾಟ ಮಾಡುವ ಉದ್ದೇಶದಿಂದ 2 ಜೀವಂತ ನಕ್ಷತ್ರ ಆಮೆಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಸಬ್ ಇನ್ಸ್‌ಪೆಕ್ಟರ್ ವಿಜಯಕುಮಾರ್ ಹಾಗೂ ಸಿಬ್ಬಂದಿ ಮಂಗಲ ಸಮೀಪದ ಹುಲುಸುಗುಡ್ಡೆಯ ಬಳಿ ದಾಳಿ ನಡೆಸಿದಾಗ 2 ನಕ್ಷತ್ರ ಆಮೆ ಇರುವುದು ಕಂಡುಬಂತು. ಬಳಿಕ ಆರೋಪಿಗಳನ್ನು ಬಂಧಿಸಿ ಕೊಳ್ಳೇಗಾಲ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲು ಆದೇಶಿಸಿದ್ದು, ಚಾಮರಾಜನರ ಜಿಲ್ಲಾ ಕಾರಾಗೃಹಕ್ಕೆ ಕಳಹಿಸಲಾಗಿದೆ. ಈ ಸಂಬಂಧ ಅರಣ್ಯ ಸಂಚಾರಿ ದಳದಲ್ಲಿ ಪ್ರಕರಣ ದಾಖಲಾಗಿದೆ.