ಹನೂರು: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವುದರ ಜತೆಗೆ ಸಂಶೋಧನೆ ಹಾಗೂ ಅವಿಷ್ಕಾರದತ್ತ ಗಮನಹರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಸಲಹೆ ನೀಡಿದರು.
ಪಟ್ಟಣದ ಜಿ.ವಿ. ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ಧ ತಾಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಹಾಗೂ ನಾಟಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜ್ಞಾನ ನಿಯಮಗಳ ಗುಂಪನ್ನು ಅನುಸರಿಸುವುದು ನಮ್ಮ ಚಿಂತನೆಯಿಂದ ನೈಜ ಸಂಗತಿಗಳನ್ನು ಹೊರ ತೆಗೆಯುವ ವಿಧಾನವಾಗಿದೆ. ಹೊಸ ಜ್ಞಾನವನ್ನು ಉತ್ಪಾದಿಸಲು ಹಾಗೂ ವ್ಯವಸ್ಥಿತ ರೀತಿಯಲ್ಲಿ ಮಾಹಿತಿ ಸಂಗ್ರಹಿಸುವುದರ ಜತೆಗೆ ವಿಶ್ಲೇಷಿಸುವ ಗುಣ ಹೊಂದಿರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ವೈಚಾರಿಕತೆ ಬೆಳೆದಂತೆ ವಿಜ್ಞಾನ ಅಭಿವೃದ್ಧಿ ಹೊಂದುತ್ತಿದೆ. ಹಾಗಾಗಿ ಸಂಶೋಧನೆ ಹಾಗೂ ಹೊಸ ಆವಿಷ್ಕಾರಗಳಿಂದ ಜಗತ್ತಿನಲ್ಲಿ ಹಲವು ಬದಲಾವಣೆಯಾಗುತ್ತಿದೆ. ಇದರ ಪರಿಣಾಮ ಬಾಹ್ಯಲೋಕಕ್ಕೆ ಮನುಷ್ಯ ಕಾಲಿಟ್ಟು ಅಲ್ಲಿನ ವಸ್ತುಸ್ಥಿತಿಯನ್ನು ಸಾಕ್ಷ್ಯ ಚಿತ್ರಗಳ ಮೂಲಕ ಭೂಮಿಗೆ ರವಾನಿಸಿರುವುದೇ ಸಾಕ್ಷಿಯಾಗಿದೆ. ಆದ್ದರಿಂದ ವಿಜ್ಞಾನ ಅಭಿವೃದ್ಧಿ ಹೊಂದಿದಂತೆ ದೇಶವು ಅಭಿವೃದ್ಧಿ ಹೊಂದುತ್ತದೆ. ಹಾಗಾಗಿ ಪ್ರತಿಯೊಬ್ಬರೂ ವೈಚಾರಿಕತೆ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ವೈಚಾರಿಕತೆ ಇರುತ್ತದೆ. ಆದರೆ ಕೆಲವರು ಚಿಂತನಾ ಶಕ್ತಿಯನ್ನು ಮೈಗೂಡಿಸಿಕೊಳ್ಳುವುದಿಲ್ಲ ಎಂದರು.
ದಿನನಿತ್ಯದ ಜೀವನದಲ್ಲಿ ವಿಜ್ಞಾನ ಅಡಗಿರುತ್ತದೆ. ಆದರೆ ಕೆಲವರಿಗೆ ಅರಿವಿಗೆ ಬರುವುದೇ ಇಲ್ಲ. ಆದ್ದರಿಂದ ವಿದ್ಯಾರ್ಥಿ ದಿಸೆಯಲ್ಲೇ ವೈಜ್ಞಾನಿಕತೆಗೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ವಿಜ್ಞಾನದಲ್ಲಿ ಕೊಡುಗೆ ನೀಡಲು ಸಾಧ್ಯ. ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ಬಳಿಕ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಂದ ವಿಜ್ಞಾನಕ್ಕೆ ಸಂಬಂಧಿಸಿದಂತೆ ನಾಟಕ ಹಾಗೂ ವಿಚಾರಗೋಷ್ಠಿ ನಡೆಸಲಾಯಿತು. ಶಿಕ್ಷಣ ಸಂಯೋಜಕ ಅಶೋಕ್, ಉಪನ್ಯಾಸಕ ನಂಜುಂಡಯ್ಯ, ಮುಖ್ಯ ಶಿಕ್ಷಕ ಮಹಾದೇವ, ಶಿಕ್ಷಕರಾದ ಶ್ರೀನಿವಾಸ ನಾಯ್ಡು, ಜಿ.ಲೋಕೇಶ್ ಇನ್ನಿತರರು ಇದ್ದರು.