ಜಿಲ್ಲೆ

ಕ್ಷೇತ್ರ ಕಳೆದುಕೊಂಡ ಬಿಜೆಪಿ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರ(ಮೀಸಲು) ಕಾಂಗ್ರೆಸ್‌ನ ಭದ್ರಕೋಟೆ. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಾಲಾಯಿತು. ಈ ಬಾರಿ ಕ್ಷೇತ್ರ ಕಳೆದುಕೊಂಡಿದೆ.

ಚಾಮರಾಜನಗರ ಜಿಲ್ಲೆಯ 4 ಮತ್ತು ಮೈಸೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ 1962ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರವಾಗಿ ರಚನೆಯಾಯಿತು. ಇದಕ್ಕೂ ಮೊದಲು ಮೈಸೂರು ಲೋಕಸಭಾ ದ್ವಿಸದಸ್ಯ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು.

ತದನಂತರ ಪ್ರತ್ಯೇಕಗೊಂಡು ಕ್ಷೇತ್ರವಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಗೆದ್ದ ಪಕ್ಷ ಕಾಂಗ್ರೆಸ್ ಮತ್ತು ಅಭ್ಯರ್ಥಿ ಎಸ್.ಎಂ.ಸಿದ್ದಯ್ಯ. ಇವರು ಕ್ರಮವಾಗಿ 1962, 1967, 1972ರ ಚುನಾವಣೆಗಳಲ್ಲಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಆದರೆ 1977ರಲ್ಲಿ ಇವರ ಬದಲು ಕಾಂಗ್ರೆಸ್‌ನಿಂದ ಬಿ.ರಾಚಯ್ಯ ಸ್ಪರ್ಧೆ ಮಾಡಿ ಗೆದ್ದರು. 1980ರಲ್ಲಿ ಕಾಂಗ್ರೆಸ್-ಐನಿಂದ, 1984, 1989, 1991ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ವಿ.ಶ್ರೀನಿವಾಸಪ್ರಸಾದ್ ವಿಜಯಮಾಲೆ ಧರಿಸಿದರು. ಹೀಗೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರಕ್ಕೆ ಜನತಾದಳ ಪ್ರವೇಸಿತು. 1996, 1998ರಲ್ಲಿ ಜನತಾಳದ ಅಭ್ಯರ್ಥಿ ಎ.ಸಿದ್ದರಾಜು ಜಯಗಳಿಸಿದರು. 1999ರಲ್ಲಿ ಜೆಡಿಯುನಿಂದ ವಿ.ಶ್ರೀನಿವಾಸಪ್ರಸಾದ್ ಗೆದ್ದರು. 2004ರಲ್ಲಿ ಜೆಡಿಎಸ್‌ನಿಂದ ಕಾಗಲವಾಡಿ ಶಿವಣ್ಣ ಸ್ಪರ್ಧೆ ಮಾಡಿ ಸಂಸದರಾದರು.

‘ಕೈ’ ತಪ್ಪಿದ್ದ ಕ್ಷೇತ್ರವನ್ನು 2009ರಲ್ಲಿ ಆರ್.ಧ್ರುವನಾರಾಯಣ್ ಗೆಲ್ಲುವ ಮೂಲಕ ಮರಳಿ ಪಡೆದುಕೊಂಡರು. 2014ರಲ್ಲೂ ಧ್ರುವ ಗೆಲುವಿನ ನಗೆ ಬೀರಿದರು. ಆದರೆ 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಶ್ರೀನಿವಾಸಪ್ರಸಾದ್ ಗೆದ್ದರು. ಹೀಗೆ ಕೈ ಕೋಟೆಯಾಗಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಮಲ ಅರಳಿತ್ತು. ಇಷ್ಟು ವರ್ಷಗಳ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿತ್ತು. ಆದರೆ ಈ ಸಲ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೇರಿಸಿಕೊಂಡಿತು.