ಯಳಂದೂರು: ಈಗ ನಾಡು ಕಾಂಕ್ರೀಟ್‌ಮಯವಾಗಿದೆ. ಹಾಗಾಗಿ ಪ್ರತಿ ಸಮಸ್ಯೆಯೂ ಉಲ್ಬಣಿಸುತ್ತಿದೆ. ನಾಡಿಗೆ ಕಾಡು ತರುವ ಕೆಲಸಕ್ಕೆ ನಾವು ಈಗ ಕೈ ಜೋಡಿಸುವ ಕಾಲ ಬಂದಿದೆ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಸಲಹೆ ನೀಡಿದರು.
ತಾಲೂಕಿನ ಬಿಳಿಗಿರಿರಂಗನಬೆಟ್ಟದ ಶ್ರೀ ಜಡೇರುದ್ರಸ್ವಾಮಿ ನರ್ಸರಿಯಲ್ಲಿ ಸೋಮವಾರ ಬೆಂಗಳೂರಿನ ಶ್ರೀ ಭುವನೇಶ್ವರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾಡು ಸಸಿಗಳ ನರ್ಸರಿ ಮಾಡಿ ಅದನ್ನು ಸಂರಕ್ಷಿಸುತ್ತಿರುವ ಸೋಲಿಗ ರಾಮೇಗೌಡರ ಸನ್ಮಾನಿಸಿ ಮಾತನಾಡಿದರು.
ಕಾಡಿನಿಂದ ಪ್ರಾಣಿ, ಸಸ್ಯ ಸಂಕುಲಗಳ ಉಳಿವಾಗುತ್ತದೆ. ಇದು ಜೀವ ಜಗತ್ತಿಗೆ ಅನಿವಾರ್ಯವಾಗಿದೆ. ಕಾಡು ಸಸ್ಯಗಳಲ್ಲಿ ಅನೇಕ ಜೀವಾಮೃತಗಳಿವೆ. ಇದನ್ನು ಸಂರಕ್ಷಿಸಿಸುವ ಕೆಲಸಕ್ಕೆ ಮುಂದಾಗಬೇಕಿದೆ. ಜಾಗತಿಕ ತಾಪಮಾನದ ನಿಯಂತ್ರಣದಲ್ಲಿ ಕಾಡಿನ ಪಾತ್ರ ಮಹತ್ವವಾಗಿರುತ್ತದೆ. ಮಾನವ, ಅಭಿವೃದ್ಧಿಯ ನೆಪದಲ್ಲಿ ಕಾಡು ನಾಶ ಮಾಡಿ ನಗರ ನಿರ್ಮಾಣ ಮಾಡುತ್ತಿದ್ದಾರೆ. ಈಗ ನಾಡಿಗೆ ಕಾಡನ್ನು ತರುವ ಕೆಲಸವನ್ನು ಮಾಡಬೇಕಿದೆ ಎಂದರು.
ಈಗ ಈ ಸಸ್ಯಗಳನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿರುವ ವಿರಳರಲ್ಲಿ ಇಲ್ಲಿನ ಸೋಲಿಗ ಸಮುದಾಯದ ರಾಮೇಗೌಡ ಅವರು ಕಳೆದ 2 ದಶಕಗಳಿಂದ ಮಾಡುತ್ತಿದ್ದಾರೆ. ಇವರು ಅಪರೂಪದ ಕಾಡು ಸಸ್ಯಗಳನ್ನು ಬೆಂಗಳೂರು ನಗರ, ಬನ್ನೇರುಘಟ್ಟ, ಮಾಕಳಿಬೆಟ್ಟ ಸೇರಿದಂತೆ ನಾಡಿನ ಉದ್ದಗಲಕ್ಕೆ ನೀಡಿದ್ದಾರೆ. ಇವರ ಬಳಿ ಅತಿ ಅಪರೂಪದ ಜಾಲ, ಆಳಲೆ, ನೀಳಲು, ಸಾಗಡೆ, ಮಾಕಳಿ ಬೇರು, ನರವಲು ಸೇರಿದಂತೆ ವಿಭಿನ್ನ ಪ್ರಭೇದದ ಗಿಡಗಳನ್ನು ಕಾಡಿನಿಂದ ಬೀಜವನ್ನು ತಂದು ಅದನ್ನು ತಮ್ಮ ನರ್ಸರಿಯಲ್ಲಿ ಬೆಳೆಸಿ ಈ ಗಿಡಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇವರಿಗೆ ಬೋರ್‌ವೆಲ್ ಕೊರೆಯಿಸಲು ಅರಣ್ಯ ಇಲಾಖೆ ಅನುಮತಿ ನೀಡದಿದ್ದರೂ ಬೇರೆಡೆಯಿಂದ ಟ್ಯಾಂಕರ್ ಮೂಲಕ ನೀರು ತಂದು ಗಿಡಗಳನ್ನು ಬೆಳೆಸುತ್ತಿರುವ ಇವರನ್ನು ಉತ್ತೇಜಿಸಲು ಬೆಂಗಳೂರಿನ ಶ್ರೀ ಭುವನೇಶ್ವರಿ ಚಾರಿಟಬಲ್ ಟ್ರಸ್ಟ್ 1 ಲಕ್ಷ ರೂ. ನಗದು ಪುರಸ್ಕಾರ ನೀಡುತ್ತಿರುವುದು ಸ್ವಾಗತಾರ್ಹ ಕ್ರಮ ಎಂದರು.
ಶ್ರೀ ಭುವನೇಶ್ವರಿ ಚಾರಿಟಬಲ್ ಟ್ರಸ್ಟ್‌ನ ಎಚ್.ಆರ್.ರಾಜಶೇಖರ ರೆಡ್ಡಿ ಮಾತನಾಡಿ, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಬಳಿ 3 ಎಕರೆ ಪ್ರದೇಶದಲ್ಲಿ ಸಣ್ಣ ವನವನ್ನು ನಿರ್ಮಾಣ ಮಾಡಲಾಗಿದ್ದು 3 ಸಾವಿರ ಗಿಡಗಳನ್ನು ನೆಡಲಾಗಿದೆ. ಇದಕ್ಕೆ ಜಾನಕಿ ಅಮ್ಮಾಳ್ ಪಾರ್ಕ್ ಎಂದು ಹೆಸರಿಡಲಾಗಿದೆ. ಇಲ್ಲಿ ರಾಮೇಗೌಡರ ನರ್ಸರಿಯಿಂದಲೂ ಗಿಡಗಳನ್ನು ತಂದು ನೆಡಲಾಗಿದ್ದು ಇದನ್ನು ಮಾದರಿಯಾಗಿ ಮಾಡಿ ತೋರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕಾಡಿನ ಪರಿಕಲ್ಪನೆಯನ್ನು ಮರುಸೃಷ್ಟಿ ಮಾಡುವ ಕೆಲಸವನ್ನು ಮಾಡಲು ಇತರರಿಗೂ ಉತ್ಸಾಹ ತುಂಬುವ ಕೆಲಸವನ್ನು ಮಾಡಲಾಗುತ್ತಿದ್ದು, ಶುದ್ಧ ಗಾಳಿ, ನೀರು ಒದಗಿಸುವ ಕೆಲಸವನ್ನು ಮುಂದಿನ ಪೀಳಿಗೆಗೆ ಜೋಪಾನವಾಗಿ ಇಡುವ ಕೆಲಸವನ್ನು ಮಾಡಬೇಕಿದೆ ಎಂದರು.
ಸನ್ಮಾನ ಸ್ವೀಕರಿಸಿದ ರಾಮೇಗೌಡ ಮಾತನಾಡಿ, ನನಗೆ ಗಿಡ ಬೆಳೆಸುವ ಆಸಕ್ತಿ ಬಾಲ್ಯದಿಂದಲೂ ಇದ್ದು ಇದು ಹವ್ಯಾಸವಾಗಿ ಮಾರ್ಪಟ್ಟಿತು. ಈಗ ಇದನ್ನು ರಕ್ಷಿಸುವ ಕೆಲಸವನ್ನು ನಾನು ಮಾಡುತ್ತಿದ್ದು ನನ್ನನ್ನು ಗುರುತಿಸಿ ಸನ್ಮಾನಿಸುತ್ತಿರುವ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶ್, ಸಣ್ಣರಂಗೇಗೌಡ, ದೀನಬಂಧು ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಅನೇಕ ಗಿರಿಜನರು ಇದ್ದರು.