ಹನೂರು: ಪಟ್ಟಣದ 3ನೇ ವಾರ್ಡಿನ ದೇವಾಂಗಪೇಟೆ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ದೇಗುಲಕ್ಕೆ ಕನ್ನಹಾಕಿದ್ದ ಕಳ್ಳರು ಹುಂಡಿಯನ್ನು ಕದ್ದೊಯ್ಯುವುದರ ಜತೆಗೆ 2 ಮನೆಗಳ ಬೀಗ ಮುರಿದು ಹಣ ಹಾಗೂ ಚಿನ್ನವನ್ನು ದೋಚಿದ್ದಾರೆ.
ಬಡಾವಣೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇಗುಲದ ಬಾಗಿಲು ಬೀಗ ಮುರಿದು ಒಳನುಗ್ಗಿರುವ ಕಳ್ಳರು ಹುಂಡಿಯಲ್ಲಿದ್ದ ಹಣ ತೆಗೆದುಕೊಂಡು ನಂತರ ಸಮೀಪದಲ್ಲೇ ಹುಂಡಿ ಬಿಸಾಕಿ ಹೋಗಿದ್ದಾರೆ. ನಂತರ ಬಡಾವಣೆ ನಿವಾಸಿ ಸರಸ್ವತಿ ಎಂಬುವರ ಮನೆ ಬಾಗಿಲು ಬೀಗ ಮುರಿದು ಬೀರುವಿನಲ್ಲಿದ್ದ ನಗದು ಹಾಗೂ 4 ಗ್ರಾಂ ತೂಕದ ಚಿನ್ನದ ಓಲೆಯನ್ನು ಕದ್ದೊಯ್ದಿದ್ದಾರೆ.
ಅದೇ ರೀತಿ ಗೋವಿಂದೇಗೌಡ ಎಂಬುವರ ಮನೆಯ ಬೀಗ ಮುರಿದಿರುವ ಕಳ್ಳರು 2 ಪ್ರತ್ಯೇಕ ಕೊಠಡಿಯಲ್ಲಿದ್ದ ಬೀರು ಬಾಗಿಲು ಮುರಿದು ಅದರಲ್ಲಿದ್ದ ನಗದು, 9 ಗ್ರಾಂ ತೂಕದ 2 ಚಿನ್ನದ ಉಂಗುರ, ಒಂದೂವರೆ ಗ್ರಾಂ ತೂಕದ ಚಿನ್ನದ ಓಲೆ ಗುಂಡು, ಬೆಳ್ಳಿ ಚೈನ್, ತಟ್ಟೆ ಹಾಗೂ ಇನ್ನಿತರೆ ಬೆಳ್ಳಿ ಪದಾರ್ಥವನ್ನು ಕದ್ದೊಯ್ದಿದ್ದಾರೆ. ಗೋವಿಂದೇಗೌಡ ಅವರು ಮನೆ ಬೀಗ ಹಾಕಿಕೊಂಡು 15 ದಿನದ ಹಿಂದೆಯೇ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.
ಸುದ್ದಿ ತಿಳಿದು ಶನಿವಾರ ಬೆಳಗ್ಗೆ ಹನೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರಲ್ಲದೇ ಜಿಲ್ಲಾ ಶ್ವಾನ ಹಾಗೂ ಬೆರಳಚ್ಚು ತಂಡವನ್ನು ಕರೆಸಿ ಶೋಧ ಕಾರ್ಯ ನಡೆಸಿದರು. ಹಾಗೆಯೇ ರಾತ್ರಿ ಲೊಕ್ಕನಹಳ್ಳಿ ಗ್ರಾಮದ ದೊಡ್ಡಸಂಪಿಗೆ ದೇಗುಲ ಸಮೀಪದ ಸತೀಶ್ ಕುಮಾರ್ ಅವರ ಜಮೀನಿನಲ್ಲಿ ಇರಿಸಲಾಗಿದ್ದ ಜೆಸಿಬಿ ಗುಂಡಿ ತೆಗೆಯುವ ಬಕೆಟ್‌ನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಈ ಕಳ್ಳತನ ಪ್ರಕರಣಗಳ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ಕಳ್ಳತನವಾಗಿರುವ ಬಡಾವಣೆಯಲ್ಲಿನ ಗೋವಿಂದೇಗೌಡ ಅವರು ಬೆಂಗಳೂರಿನಲ್ಲಿದ್ದರೆ, ಸರಸ್ವತಿ ಅವರು ಮಗಳ ಮನೆಯಲ್ಲಿದ್ದು, ಬಾಗಿಲಿಗೆ ಬೀಗವನ್ನು ಹಾಕಲಾಗಿತ್ತು. ಇನ್ನು ಚೌಡೇಶ್ವರಿ ದೇಗುಲವು ಎಂದಿನಂತೆ ಬಾಗಿಲು ಮುಚ್ಚಲಾಗಿತ್ತು. ಇದೆಲ್ಲವನ್ನು ತಿಳಿದವರೇ ಕಳ್ಳತನ ಎಸಗಿದ್ದಾರೆ ಎಂಬ ಅನುಮಾನ ಸ್ಥಳೀಯರಿಂದ ವ್ಯಕ್ತವಾಗಿದೆ.