ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿಮಳೆಯಿಂದಾಗಿ ಬಿತ್ತನೆ ಮಾಡಿರುವ ಜಮೀನುಗಳು ಮಳೆ ನೀರಿನಿಂದ ಮುಳುಗಡೆಯಾಗಿದೆ.
ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಕುದೇರು, ಉಮ್ಮತ್ತೂರು, ಬಾಗಳಿ, ಮೂಡಲ ಅಗ್ರಹಾರ, ಬಾಣಹಳ್ಳಿ, ತೆಳ್ಳನೂರು, ಕೆಂಪನಪುರ, ಎಚ್.ಮೂಕಹಳ್ಳಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು ಜಮೀನುಗಳಲ್ಲಿ ಸೂರ್ಯಕಾಂತಿ, ಉದ್ದು, ಅಲಸಂದೆ, ಹೆಸರು ಕಾಳುಗಳನ್ನು ಬಿತ್ತನೆ ಮಾಡಿದ್ದರು. ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ತುಂಬಿಕೊಂಡಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸಾವಿರಾರು ರೂ. ನಷ್ಟವಾಗಿದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.