ಚಾಮರಾಜನಗರ: ಪತ್ರಕರ್ತರು ಸತ್ಯ ಸಂಗತಿಗಳನ್ನು ಮಾತ್ರ ಬಹಿರಂಗ ಪಡಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಗಂಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪತ್ರಕರ್ತರ ಸಂಘ, ರೋಟರಿ ಸಂಸ್ಥೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಳ್ಳು ಸಂಗತಿಗಳನ್ನು ಪ್ರಕಟಿಸುವುದರಿಂದ ಗಲಾಟೆಗಳು, ಸಂಘರ್ಷ ಸೃಷ್ಠಿಸುವಂತ ಸನ್ನಿವೇಶಗಳು ಉಂಟಾಗುತ್ತದೆ. ಸಮಾಜದ ಅಳಿವು ಉಳಿವು ಪತ್ರಕರ್ತರ ಮೇಲೆ ನಿಂತಿದೆ. ಪತ್ರಕರ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ ಎಂದರು.
ಇದೇ ವೇಳೆ ಪತ್ರಕರ್ತ ತಂಗಂ ಜಿ.ಗೋಪಿನಾಥಂ, ಪತ್ರಿಕಾ ವಿತರಕ ಬಿ.ಕೆ.ಮಂಜುನಾಥ್ ಆರಾಧ್ಯ ಸೇರಿದಂತೆ ಇತರರಿಗೆ ಸನ್ಮಾನಿಸಲಾಯಿತು. ನಂತರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿಯ 10, ಪಿಯುಸಿಯ 20 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ , ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಬಂಗಾರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು, ಉನ್ಯಾಸಕಿ ಶಶಿಲಾ, ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಬಿ.ಚಂದ್ರಶೇಖರ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಎ.ರಮೇಶ್, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಗೌರವಾಧ್ಯಕ್ಷ ಮಹಮದ್ ಅಸ್ಗರ್ (ಮುನ್ನಾ), ವರದಿಗಾರರ ಕೂಟ ಅಧ್ಯಕ್ಷ ಅಸ್ಲಾಂ ಪಾಷಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿರೋಪಾಕ್ಷ, ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಜಹೀರ್ ಅಹ್ಮದ್, ಕಲಾವಿದೆ ಅಕ್ಷತಾ ಎಸ್.ಜೈನ್ ಇತರರು ಇದ್ದರು.