ಜಿಲ್ಲೆ

ಪುಟ್ಟರಾಜುಗೆ ಬಿ ಫಾರ್ಮ್ ಕೊಟ್ಟವರು ಯಾರು: ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪ್ರಶ್ನೆ

ಮಂಡ್ಯ: ಹದಿನಾಲ್ಕು ತಿಂಗಳು ಸಚಿವರಾಗಿದ್ದ ಸಿ.ಎಸ್.ಪುಟ್ಟರಾಜು ಕೊಡುಗೆ ಏನೆಂದು ಉತ್ತರಿಸಲಿ. ಆ ಮೇಲೆ ಅವರ ಸವಾಲು ಸ್ವೀಕರಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್ ನೀಡಿದರು.

ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಬಗ್ಗೆ ಚರ್ಚಿಸಲು ಆಹ್ವಾನ ನೀಡಿರುವ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಟ್ಟರಾಜು ಕೊಡುಗೆ ಏನೆಂದು ಹೇಳಲಿ. ಅವರ ಸವಾಲನ್ನು ಶಾಸಕ ರವಿಕುಮಾರ್ ಗಣಿಗ ಎದುರಿಸುತ್ತಾರೆ. ಪಾಪ ನನಗೆ ಪುಟ್ಟರಾಜುನೇ ಊಟ, ತಿಂಡಿ, ಬಟ್ಟೆ ಕೊಟ್ಟು ನನ್ನ ಸಾಕಿದವನು. ಅವರಿಗೆ ಲೋಕಸಭಾ ಚುನಾವಣೆ ನೆನಪು ಮಾಡಿಕೊಳ್ಳುವುದಕ್ಕೆ ಹೇಳಿ. ಆತನಿಗೆ ಬಿ ಫಾರ್ಮ್ ಕೊಟ್ಟವರು ಯಾರೆಂದು ಕೇಳಿ ಎಂದು ತಿರುಗೇಟು ನೀಡಿದರು.

ಚಲುವರಾಯಸ್ವಾಮಿ ನನ್ನ ಎದುರಾಳಿನಾ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಯಪ್ಪಾ, ಯಪ್ಪಾ ಎಲ್ಲದರೂ ಉಂಟಾ. ಅವರಿಗೆ ಎದುರಾಳಿ ಆಗುತ್ತಾ ಸಾಧ್ಯನೆ ಇಲ್ಲ. ಅವರು 28 ಕ್ಷೇತ್ರಕ್ಕೂ ಒಂದೇ ಬಾರಿ ನಿಲ್ಲಬಹುದು. ಅವರು ನಿಂತುಕೊಂಡರೆ ಯಾರು ಎದುರಾಳಿನೆ ಇಲ್ಲ. ನಾನು ಯಾವತ್ತು ಅವರ ಎದುರಾಳಿ ಎಂದಿಲ್ಲ. ನನಗೆ ನನ್ನ ಜಿಲ್ಲೆ, ನನ್ನ ಕ್ಷೇತ್ರ, ರಾಜ್ಯ ಅಷ್ಟೇ. ಕುಮಾರಸ್ವಾಮಿಗೆ ತೊಡೆ ತಟ್ಟೋದು ನನಗೆ ಅವಶ್ಯಕತೆ ಇಲ್ಲ. ಅವರಿಗೆ ಬೇರೆಯವರ ವಿರುದ್ಧ ತೊಡೆ ತಟ್ಟೋ ಅವಶ್ಯಕತೆ ಇದೆ ಎಂದರು.

ನಮಗೆ ಹಾಗೂ ನಮ್ಮ ಜಿಲ್ಲೆಗೆ ಒಂದು ಸಂಸ್ಕಾರ ಇದೆ. ದೇವೇಗೌಡರ ಮಗ ಎಂದು ಅವರ ಮೇಲೆ ಒಂದು ಗೌರವವಿದೆ. ಎಚ್‌ಡಿಕೆ ದೇವೇಗೌಡರ ಮಗ ಆಗಿರಲಿಲ್ಲ ಎಂದಿದ್ದರೆ ಉತ್ತರ ಹೇಳುತ್ತಿದ್ದೋ ಅಷ್ಟೇ. ನಾನು ಅವರಂತೆ ಲಘುವಾಗಿ ಮಾತಾನಾಡುವುದಕ್ಕೆ ಆಗಲ್ಲ. ನಾವು ಸೋತಾಗ 5 ವರ್ಷ ಸುಮ್ಮನಿದ್ದೆವು. ಮಂಡ್ಯ ಒಳ್ಳೆಯದು ಮಾಡಲಿ ಎಂದು ನಾವು ಹೇಳಿದ್ದೇವು. ಈಗ ಅವರು ಅಭಿವೃದ್ಧಿ ಮಾಡಿ ಎಂದು ಸುಮ್ಮನಿರಬೇಕು. ಜೆಡಿಎಸ್‌ಗೆ ಮಂಡ್ಯ ಅಭಿವೃದ್ಧಿ ಬೇಡಾ, ಅಧಿಕಾರ ಬೇಕು ಅಷ್ಟೇ ಎಂದು ಟೀಕಿಸಿದರು.