ಜಿಲ್ಲೆ

ಸಿಎಂ ಆಗಲು ಎಚ್‌ಡಿಕೆ ನಮ್ಮ ಮುಂದೆ ಕೈಕಟ್ಟಿ ನಿಂತಿದ್ದರು: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

ಮಂಡ್ಯ: ನಾನು ಸಿಎಂ ಆಗಲು ಚಲುವರಾಯಸ್ವಾಮಿ ಅವರ ಸ್ನೇಹಿತರು ಕಾರಣ ಎಂದು ಸದನದಲ್ಲಿ ಹೇಳಿದ್ದಾರೆ. ಧರ್ಮಸ್ಥಳದ ಹೆಸರು ಹೇಳಿ ಇವರು ಯಾರು ಕಾರಣರಲ್ಲ ಎಂದು ಹೇಳಲಿ. ನನ್ನ ಕ್ಯಾರೆಕ್ಟರ್ ಬಗ್ಗೆ ಹೇಳಲು ಏನು ಇಲ್ಲ. ಆತನ ಕ್ಯಾರೆಕ್ಟರ್ ಏನೆಂದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಇನ್ನೊಬ್ಬರ ಕ್ಯಾರೆಕ್ಟರ್ ಬಗ್ಗೆ ಮಾತನಾಡುವ ಕಸುಬು ನನ್ನದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಏನಿದೆ ಅದನ್ನು ಅವರು ಹೇಳಲಿ. ನಾನು ಯಾರ ವೈಯಕ್ತಿಕ ಕ್ಯಾರೆಕ್ಟರ್ ಬಗ್ಗೆ ಹೇಳಿಲ್ಲ. ನಾನು ಹೇಳಿದ್ದು ಕುಮಾರಸ್ವಾಮಿ ರಾತ್ರಿ ತಡವಾಗಿ ಏಕೆ ಹೋಗುತ್ತಿದ್ದರು ಎಂದಷ್ಟೇ. ಅವರೇನು ನನ್ನಂದ ತಡವಾಗಿ ಹೋಗುತ್ತಾ ಇರಲಿಲ್ಲ. ಏಕೆ ಎಂದು ಅವರೇ ಸ್ಪಷ್ಟಪಡಿಸಲಿ. ನನಗೆ ಸಂಸ್ಕಾರ ಗೌರವ ಇದೆ. ಅವರು ಬಾಯಿಗೆ ಏನು ಬರುತ್ತದೋ, ಅದನ್ನೇ ಮಾತಾಡುತ್ತಾರೆ. ಇವೆಲ್ಲಾ ಹೆಚ್ಚು ದಿವಸ ನಡೆಯಲ್ಲ ಎಂದರು.

ಎಚ್.ಡಿ.ಕುಮಾರಸ್ವಾಮಿಯನ್ನು ನೋಡಿ ಸಾಕಾಗಿದೆ. ಅಂದು ಸಿಎಂ ಆಗಲು ನಮ್ಮ ಮುಂದೆ ಕೈ ಕಟ್ಟಿಕೊಂಡು ನಿಂತಿದ್ದರು. ನಾವು ನಮ್ಮನ್ನು ಸಚಿವರನ್ನಾಗಿ ಮಾಡಿ ಎಂದು ಕೇಳಿದ್ದು ನಮ್ಮ ಹಕ್ಕು. ನನಗೆ ಅರ್ಹತೆ ಇತ್ತು, ಅದಕ್ಕೆ ಸಚಿವ ಸ್ಥಾನ ಕೊಟ್ಟಿದ್ದರು. ದೇವೇಗೌಡರು, ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್, ಸಿಂಧ್ಯಾ ಎಲ್ಲರೂ ಸೇರಿ ಮಂತ್ರಿ ಮಾಡಿದರು. ಕುಮಾರಸ್ವಾಮಿ ಸಿಎಂ ಮಾಡುವಾಗ ದೇವೇಗೌಡರು, ರೇವಣ್ಣ, ಸಿದ್ದರಾಮಯ್ಯ, ಬಚ್ಚೇಗೌಡ ಯಾರು ಇರಲಿಲ್ಲ. ಆಗ ಕುಮಾರಸ್ವಾಮಿ ಜತೆ ಇದ್ದಿದ್ದು ಚಲುವರಾಯಸ್ವಾಮಿ ಮತ್ತು ಸ್ನೇಹಿತರು. ನನ್ನ ಮಂತ್ರಿ ಮಾಡಲು 10 ಜನ ಇದ್ದರು. ಇವರನ್ನಾ ಸಿಎಂ ಮಾಡಲು ನಾನು ನನ್ನ ಸ್ನೇಹಿತರೇ ಇದ್ದಿದ್ದು. ಕುಮಾರಸ್ವಾಮಿ ಅವರಷ್ಟು ಮನೆಗಳನ್ನು ಯಾರು ಹಾಳು ಮಾಡಿಲ್ಲ. ಸದನದಲ್ಲಿ ಅವರು ತಪ್ಪು ಒಪ್ಪಿಕೊಂಡರೆ ತಪ್ಪು ಒಪ್ಪಿಗೆನಾ. ತಪ್ಪು ಎಲ್ಲಿ ಒಪ್ಪಿಕೊಂಡರು ತಪ್ಪೆ. ನನ್ನ ಕುಮಾರಸ್ವಾಮಿ ಕೆರಳಿಸುವುದಕ್ಕೆ ಆಗಲ್ಲ. ನಾನು ಪ್ರಾಮಾಣಿಕವಾಗಿ ಇದ್ದೇನೆ, ನನ್ನಿಂದ ಕುಮಾರಸ್ವಾಮಿಗೆ ಸಹಾಯವಾಗಿದೆ. ದೇವರು ಕುಮಾರಸ್ವಾಮಿ ಅವರನ್ನು ಚೆನ್ನಾಗಿ ಇಟ್ಟಿರಲಿ. ಅವರ ರೀತಿ ನಾವು ಕೆಟ್ಟದನ್ನು ಬಯಸಲ್ಲ ಎಂದು ಹೇಳಿದರು.