ಜಿಲ್ಲೆ

ಅಭಿವೃದ್ಧಿಯನ್ನ ಎಚ್‌ಡಿಡಿ ಕುಟುಂಬ ಸಹಿಸಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ

ಮಂಡ್ಯ: ಮಂಡ್ಯ ಜಿಲ್ಲೆಯ ಅಭಿವೃದ್ಧಿಯನ್ನು ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಸಹಿಸಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಕ್ಕೆ ಹಾಸನದ ಕೃಷಿ ಮಹಾವಿದ್ಯಾಲಯದ ವಿಲೀನಕ್ಕೆ ಎಚ್.ಡಿ.ರೇವಣ್ಣ ವಿರೋಧ ವ್ಯಕ್ತಪಡಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕೃಷಿ ವಿವಿಯನ್ನು ಹಾಸನಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಆಸೆ ಇತ್ತು. ಆದರೆ ರೇವಣ್ಣನ ಆಸೆ ನಿರಾಸೆ ಆಗಿದೆ. ಅವರ ತಂದೆ ಮಂಡ್ಯ ನನ್ನ ಹೃದಯ ಎನ್ನುತ್ತಾರೆ. ಎಚ್‌ಡಿಕೆ ಮಂಡ್ಯ ಮತ್ತು ಹಾಸನ ನನ್ನ ಎರಡೂ ಕಣ್ಣು ಎನ್ನುತ್ತಾರೆ. ರೇವಣ್ಣ ನಾನು ಮಂಡ್ಯಕ್ಕೆ ಬರಲ್ಲ, ಮಂಡ್ಯಕ್ಕೆ ನಮಗೂ ಸಂಬಂಧ ಇಲ್ಲವೆನ್ನುತ್ತಾರೆ. ವಿ.ಸಿ ಫಾರ್ಮ್ ಸಂಶೋಧನಾ ಕೇಂದ್ರವನ್ನು ನಾಲ್ವಡಿ ಕೊಟ್ಟರು. ಇವತ್ತಿಗೂ ಹೆಚ್ಚು ಸಂಶೋಧನೆ ನಡೆಯುತ್ತಿದೆ. ಹಾಸನ ಮತ್ತು ಮಂಡ್ಯ ಒಂದೇ ವಾತಾವರಣ. ಸಂಶೋಧನೆಗೆ ಒಳ್ಳೆಯ ನೀರಿದೆ, ತಾಂತ್ರಿಕ ತಂಡವಿದೆ. ರೈತರಿಗೆ ಹೆಚ್ಚು ಅನುಕೂಲ ಆಗುತ್ತದೆ. ಮೈಸೂರು ವಿಭಾಗಕ್ಕೆ ಹಾಸನ ಸೇರಿದೆ. ಈ ಹಿನ್ನೆಲೆಯಲ್ಲಿ ವಿವಿಯನ್ನು ಹಾಸನಕ್ಕೆ ತೆಗೆದುಕೊಂಡು ಹೋಗಬೇಕೆಂದು ಆಸೆ ಇಟ್ಟಿಕೊಂಡಿದ್ದರೆನೋ ಎಂದರು.

ಎಚ್‌ಡಿಕೆ ರಾಮನಗರದಿಂದ ಹೊರಬಂದಾಗ ಮಂಡ್ಯದವರು ಶಕ್ತಿ ಕೊಟ್ಟರು. ಅವರ ತಮ್ಮ ಅಣ್ಣನ ತಪ್ಪಿನ ಬಗ್ಗೆ ಮಾತನಾಡುತ್ತಿಲ್ಲ. ಮಂಡ್ಯ ವಿವಿಗೆ ಹಾಸನ ಸೇರಿದರೆ ತಪ್ಪೇನು?. ಬೆಂಗಳೂರಿಗೆ ಹೋಗುವ ಬದಲು ಮಂಡ್ಯವೇ ಇರಲಿ ಎಂದು ಕುಮಾರಸ್ವಾಮಿ ಹೇಳಬಹುದಿತ್ತು. ಜೆಡಿಎಸ್ ನಿಲುವಿನ ಬಗ್ಗೆ ನೋಡಿದೇನೆ. ಇದನ್ನು ನಮ್ಮ ಜನ ಅರ್ಥ ಮಾಡಿಕೊಳ್ಳಬೇಕು. ಜೆಡಿಎಸ್ ಬಿಟ್ಟಾಗ ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ವಲ್ಪ ವರ್ಷದ ಬಳಿಕ ಬಿಟ್ಟದ್ದು ಸರಿ ಎಂದು ಕೆಲವರು ಒಪ್ಪಿಕೊಂಡರು. ಅದೇ ರೀತಿ ಮಂಡ್ಯ ಜಿಲ್ಲೆಯ ಜನಕ್ಕೆ ಸಧ್ಯದಲ್ಲೇ ಗೊತ್ತಾಗುತ್ತದೆ. ಅವರು ಮಂಡ್ಯ ಅಭಿವೃದ್ಧಿ ಸಹಿಸಲ್ಲ. ಹಾಸನಕ್ಕೆ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಏನೆಲ್ಲ ಮಾಡಿದ್ದಾರೆ ನೋಡಿಕೊಂಡು ಬನ್ನಿ ಎಂದು ಹೇಳಿದರು.

ಸಚಿವ ಸತೀಶ್ ಜಾರಕಿಹೋಳಿ ಮತ್ತು ಎಚ್.ಡಿ.ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಯಾರನನ್ನು ಭೇಟಿ ಮಾಡಬೇಡಿ ಎನ್ನುವುದಕ್ಕೆ ಆಗುವುದಿಲ್ಲ. ಅದು ಅವರ ವೈಯಕ್ತಿಕ ಭೇಟಿ. ಸತೀಶ್ ಜಾರಕಿಹೋಳಿ ನಮ್ಮ ಪಕ್ಷದ ನಾಯಕರು, ಮಂ ತ್ರಿಗಳು. ಆದ್ದರಿಂದ ಇಬ್ಬರ ಭೇಟಿ ರಾಜಕೀಯ ವಿಚಾರಕ್ಕಲ್ಲ. ಅದೇ ರೀತಿ ರಾಜಕೀಯವಾಗಿ ಭೇಟಿ ಮಾಡುವ ಅವಶ್ಯಕತೆ ಇಲ್ಲ. ಆದರೂ ಇಬ್ಬರ ಭೇಟಿ ಏಕೆ ಆಗಿದೆ ಎಂದು ನಾನು ಕೇಳೋಕೆ ಆಗಲ್ಲ ಎಂದರು.