ಬಾದಾಮಿ: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಚಾಲುಕ್ಯ ಉತ್ಸವವನ್ನು ಫೆಬ್ರವರಿಯಲ್ಲಿ ಆಚರಿಸಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಳಿದಾಸ ಉತ್ಸವ-2025 ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಚಾಲುಕ್ಯ ಉತ್ಸವವನ್ನು ಈ ಬಾರಿ ಆಚರಿಸಲು ನಿರ್ಧರಿಸಲಾಗಿದೆ. ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಚಾಲನೆ ನೀಡಿ ಸಭೆ ನಡೆಸಲಾಗಿದೆ ಎಂದರು.
ಖ್ಯಾತ ವೈದ್ಯ ಸಾಹಿತಿ ಡಾ.ಕರವೀರಪ್ರಭು ಕ್ಯಾಲಕೊಂಡ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಮಾಜಿ ಜಿ.ಪಂ.ಉಪಾಧ್ಯಕ್ಷ ಡಾ.ಎಂ.ಎಚ್.ಚಲವಾದಿ ಮಾತನಾಡಿದರು.
ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಿ.ಬಿ. ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟೀಮನಿ, ಸದಸ್ಯ ಮಂಜುನಾಥ ಹೊಸಮನಿ, ವೈ.ಆರ್.ಹೆಬ್ಬಳ್ಳಿ, ಚಿದಾನಂದಕಾಟವಾ, ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ, ಶೈಕ್ಷಣಿಕ ಆಡಳಿತಾಧಿಕಾರಿ ಕೆ. ರಾಘವನ್, ಬಿ.ಬಿ. ಸೂಳಿಕೇರಿ, ಶಿವು ಕೊನೇರಿ ಮತ್ತಿತರರಿದ್ದರು.
ಶಿವಯೋಗಿ ಕುಂಬಾರ ನಿರ್ವಹಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.