ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ತೆಲಂಗಾಣದ ಕೊಂಡಲಕ್ಷ್ಮಣ ತೆಲಂಗಾಣ ರಾಷ್ಟ್ರ ವಿಜ್ಞಾನ ವಿವಿಯಲ್ಲಿ ವಿಜ್ಞಾನಿಯಾಗಿರುವ ಚಳ್ಳಕೆರೆ ನಗರದ ಎ.ಮಮತಾ ಯುವ ಮಹಿಳಾ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಭಾನುವಾರ (ಜೂ.11) ಹಮ್ಮಿಕೊಂಡಿದ್ದ 5ನೇ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ಮಮತಾ ಅವರ ಐದು ವರ್ಷದ ತರಕಾರಿ ಶಾಸ್ತ್ರದ ಅಧ್ಯಯನ ವಿಷಯದ ಕುರಿತ ಲೇಖನ ಪ್ರಶಸ್ತಿಗೆ ಆಯ್ಕೆಯಾಗಿದೆ.
‘ಹವಾಮಾನ ಬದಲಾವಣೆ ಮತ್ತು ಕೃಷಿಕರಲ್ಲಿನ ಪ್ರಭಾವ’ ಕುರಿತಾಗಿ ಮಮತ ಲೇಖನ ಬರೆದಿದ್ದರು.
ಹಿನ್ನೆಲೆ
ಚಳ್ಳಕೆರೆ ವಿಠಲನಗರ ನಿವಾಸಿ ಅಜ್ಜಪ್ಪ, ಕೆಂಚಮ್ಮ ದಂಪತಿ ಪುತ್ರಿ ಮಮತಾ, ನವಚೇತನ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದಿದ್ದಾರೆ.
ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಬಳಿಕ ಮೂಡುಬಿದರೆಯಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಪದವಿ ಪಡೆದಿದ್ದಾರೆ.
ಬಾಗಲಕೋಟೆಯ ತೋಟಗಾರಿಕೆ ವಿಶ್ವ ವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದಿದ್ದು, ಮೊಳಕಾಲ್ಮೂರಿನ ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿಯಾಗಿ 2 ವರ್ಷ ಸೇವೆ ಸಲ್ಲಿಸಿದ್ದಾರೆ.
ನಂತರ ತೆಲಂಗಾಣ ವಿವಿ ವಿಜ್ಞಾನಿಯಾಗಿ ನಿಯೋಜನೆಗೊಂಡಿದ್ದಾರೆ.
ಪಾಲಕರ ಆಸಕ್ತಿಯಂತೆ ಶಿಕ್ಷಣದಲ್ಲಿ ವಿಶೇಷವಾದ ಸಾಧನೆ ಮಾಡಬೇಕು ಎಂಬ ಗುರಿ ಇರಿಸಿಕೊಂಡು ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡೆ. ಪದವಿ ಹಂತದಲ್ಲಿ ಒಳ್ಳೆಯ ಸಹಪಾಠಿಗಳು ಮತ್ತು ಪ್ರಾಧ್ಯಾಪಕರ ಪ್ರೋತ್ಸಾಹದಿಂದ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಯಿತು.ಡಾ.ಎ.ಮಮತಾ, ಯುವ ವಿಜ್ಞಾನಿ