ಜಿಲ್ಲೆ

ಸಣ್ಣ ಜಗಳಕ್ಕೂ ಕೋರ್ಟ್‌ಗೆ ಬರದಿರಿ

Chitradurga

ಚಳ್ಳಕೆರೆ: ಸಣ್ಣ ಗಲಾಟೆ, ಗಲಭೆಗಳು ಗ್ರಾಮದ ಶಾಂತಿ ಕದಡುವ ಜತೆಗೆ ಬದುಕಿನಲ್ಲಿ ನೆಮ್ಮದಿ ಇಲ್ಲದ ಪರಿಸ್ಥಿತಿ ತರುತ್ತವೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು.

ತಾಲೂಕಿನ ಕಲಮರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮದ ವ್ಯಾಜ್ಯಗಳನ್ನು ಕೋರ್ಟ್, ಕಚೇರಿಗಳಿಗೆ ಹೋಗದಂತೆ ಗ್ರಾಮಸ್ಥರ ತೀರ್ಮಾನದಂತೆ ಬಗೆಹರಿಸಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಣ್ಣ ಗಲಾಟೆಗೆ ಪ್ರಚೋದನೆ ಮಾಡಿಕೊಂಡು ನ್ಯಾಯಾಲಯದ ಮೆಟ್ಟಿಲು ಏರಬಾರದು. ಇದರಿಂದ ಹಣ, ಆಸ್ತಿ, ಸಮಯ ಕಳೆದುಕೊಂಡು ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಕಾನೂನಿನ ಜಾಗೃತಿ ಮೂಲಕ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಿಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳುವುದು ಅಗತ್ಯವಿದೆ ಎಂದು ಸಲಹೆ ನೀಡಿದರು.

ಅಪ್ರಾಪ್ತರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮಾಡುವವರು ಪೋಸ್ಕೋ ಕಾಯ್ದೆಯಡಿ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಕೀಲೆ ಬಿ.ಎಂ.ಬಸವರಾಜೇಶ್ವರಿ ಮಾತನಾಡಿ, ಹಳ್ಳಿಗಳಲ್ಲಿ ಈಗಲೂ ಬಾಲ್ಯ ವಿವಾಹ ಮಾಡುವ ಸಲುವಾಗಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಲಾಗುತ್ತಿದೆ. ಇದರಿಂದ ಮಕ್ಕಳ ಭವಿಷ್ಯವನ್ನು ಪಾಲಕರೇ ನಾಶ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ, ವಕೀಲರಾದ ತಿಪ್ಪಯ್ಯ, ಕುರುಡಿಹಳ್ಳಿ ಶ್ರೀನಿವಾಸ, ಎಲ್.ಕುಮಾರ್, ಪ್ರಭಾಕರ, ರುದ್ರಯ್ಯ, ಸುಮಲತಾ, ಶಿಲ್ಪಾ, ಚಂದ್ರಶೇಖರ ಮತ್ತಿತರರು ಇದ್ದರು.