ಜಿಲ್ಲೆ

ಮಳೆ, ಬೆಳೆ ಸಮೃದ್ಧಿಗೆ ವಿಶೇಷ ಪೂಜೆ

ಧನಂಜಯ ಎಸ್.ಹಕಾರಿ.

ಚಳ್ಳಕೆರೆ: ನಗರದ ತ್ಯಾಗರಾಜ ನಗರ, ಅಂಬೇಡ್ಕರ್ ನಗರ ಮತ್ತು ಮಾರಮ್ಮನ ಗುಡಿ ಭಾಗದ ವಾರ್ಡ್‌ಗಳಲ್ಲಿ ಮಂಗಳವಾರ ಮಳೆಗಾಗಿ ಪ್ರಾರ್ಥನೆ ನಡೆಸಿ, ವಿಶೇಷ ಪೂಜೆ ಕಾರ್ಯಕ್ರಮಗಳಿಂದ ಹೋಳಿಗೆಮ್ಮ ಹಬ್ಬ ಆಚರಿಸಲಾಯಿತು.

ಪ್ರತಿ ಮನೆಗಳಲ್ಲಿ ನೆಲಕರಣೆ ಮಾಡಿ, ಒಂದೊತ್ತು ಉಪವಾಸದ ಪದ್ಧತಿಯಂತೆ ಸಿಹಿ ಪದಾರ್ಥದ ಹೋಳಿಗೆ ಊಟ ತಯಾರಿಸಿ, ಹೊಸದಾಗಿ ತಂದಿದ್ದ ಬಿದಿರು ಮೊರದಲ್ಲಿ ಹಣ್ಣು, ಹೂವು, ಕಾಯಿ, ಬಾಳೆ ಹಣ್ಣು, ಹೋಳಿಗೆ ಊಟ ಇರಿಸಿಕೊಂಡು ಸಮೀಪದ ಮಾರಮ್ಮನ ಗುಡಿ ಬಳಿ ಪೂಜೆ ಮಾಡಲಾಯಿತು.

ಬಳಿಕ ತಮಟೆ ವಾದ್ಯದೊಂದಿಗೆ ಕೆಲವರು ಮಾರಮ್ಮನಿಗೆ ಸಮರ್ಪಿಸಿದ್ದ ಹೋಳಿಗೆ ಪದಾರ್ಥಗಳನ್ನು ಬಿದಿರು ಬುಟ್ಟಿಯಲ್ಲಿ ತುಂಬಿಕೊಂಡು ನೆತ್ತಿಯ ಮೇಲೆ ಹೊತ್ತು ಜನ, ಜಾನುವಾರುಗಳಿಗೆ ಯಾವುದೇ ರೋಗ ಭಾದೆ ಬಾರದಿರಲಿ.

ಸಮೃದ್ಧ ಮಳೆ-ಬೆಳೆ ಆಗಲಿ ಎಂದು ಬೇಡಿಕೊಳ್ಳುತ್ತ ಅಮ್ಮನನ್ನು ಶಾಂತಿಯಾಗಿ ಊರ ಹೊರಕ್ಕೆ ಸಾಗಿ ಹಾಕಿದರು.

ಅಮ್ಮನ ಹೋಳಿಗೆ ಬುಟ್ಟಿ ಹೊತ್ತಿದ್ದವರ ಕಾಲುಗಳಿಗೆ ಮಹಿಳೆಯರು ಬಿಂದಿಗೆಗಳಿಂದ ನೀರು ಸುರಿದು ನಮಸ್ಕರಿಸಿದರು.ಊರಿಂದ ದೂರ ಇರುವ ತಂಗಟೆ ಗಿಡಗಳ ಬಳಿ ಬೇವಿನ ಸೊಪ್ಪಿನಿಂದ ದೇವಿಗೆ ಗುಡಿಸಲು ಕಟ್ಟಿದ ಸ್ಥಳದಲ್ಲಿ ಹೋಳಿಗೆ ಪದಾರ್ಥಗಳನ್ನು ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಪೂಜಾರಿ ಮನು, ಹರ್ಷ, ಮಂಜುನಾಥ್, ರಂಗಪ್ಪ, ಅರುಣ್, ರಾಜಣ್ಣ, ತಿಪ್ಪೇಸ್ವಾಮಿ, ಮಲ್ಲಯ್ಯ, ಗುರುಸ್ವಾಮಿ, ಕುಮಾರ್, ಭೀಮಣ್ಣ, ವಿಜಯ್ ಕುಮಾರ್ ಇತರರಿದ್ದರು.