ಚಳ್ಳಕೆರೆ: ವಾಲ್ಮೀಕಿ ಸಮುದಾಯ ಹಾಗೂ ಮಹರ್ಷಿ ಕುರಿತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸದನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಶುಕ್ರವಾರ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ ಮುಖಂಡರು, ಸಂವಿಧಾನದ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಪ್ರತಿ ಸಮುದಾಯಗಳನ್ನು ಸಮಾನವಾಗಿ ಕಾಣುವ ಮನಸ್ಥಿತಿ ಇರಬೇಕು ಎಂದರು.
ಆದರೆ, ವಿಧಾನಸೌಧದಲ್ಲೆ ಜಾತಿನಿಂದನೆ ಮಾಡಲಾಗುತ್ತಿದೆ. ಶಾಸಕ ಯತ್ನಾಳ್ ಅವರು ವಾಲ್ಮೀಕಿ ಸಮುದಾಯ ಕೀಳು ಜಾತಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇದಕ್ಕೆ ಮೀಸಲಾತಿ ಅಡಿಯಲ್ಲಿ ಗೆದ್ದವರೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ಬೇಸರಿಸಿದರು.
ಮುಖಂಡರಾದ ಯಾದಲಗಟ್ಟೆ ಜಗನ್ನಾಥ, ಪಿ.ತಿಪ್ಪೇಸ್ವಾಮಿ, ಗೌರೀಶ, ಜಯಲಕ್ಷ್ಮಿ, ಪಿ.ಒ.ನಾಗೇಶ, ರಾಜಣ್ಣ, ಸಂತೋಷ್ ಇದ್ದರು.