ಚಳ್ಳಕೆರೆ: ತಾಲೂಕಿನ ಸಿದ್ದೇಶ್ವರನದುರ್ಗ ಗ್ರಾಮದ ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಅಲ್ಪ ಸಂಖ್ಯಾತ ಕುಟುಂಬಗಳಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಈಚೆಗೆ ನಡೆದ ಜನ ಸಂಪರ್ಕ ಸಭೆಯಲ್ಲಿ ಈ ಕುರಿತು ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಅನುಕೂಲವಾಗಿಲ್ಲ. ಒಂದು ಕುಟುಂಬದಲ್ಲಿ ಎರಡು-ಮೂರು ಸಂಸಾರಗಳು ಜೀವನ ನಡೆಸುವುದು ಕಷ್ಟವಾಗಿದೆ. ಕೂಲಿ ಬದುಕಿನಿಂದ ಜೀವನ ಮಾಡುತ್ತಿರುವ ಬಡಕುಟುಂಬಗಳಿಗೆ ನಿವೇಶನದ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್, ಕೂಡಲೇ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ಮತ್ತು ಪಂಚಾಯಿತಿ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಮಾಡಿಸಿ, ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಮಾಜಿ ಸದಸ್ಯ ಎನ್. ನರಸಿಂಹಯ್ಯ, ಲಲಿತಮ್ಮ, ಭಾಗ್ಯಮ್ಮ, ಬೋಜಾಕ್ಷಮ್ಮ, ಸಹೇರಾ, ಪರ್ವಿನ್, ತಿಮ್ಮಕ್ಕ, ಪ್ರಮಿಳಮ್ಮ, ಬಸಕ್ಕ, ಜಯಲಕ್ಷ್ಮೀ ಮತ್ತಿತರರು ಇದ್ದರು.