ಜಿಲ್ಲೆ

ಗಡಿಗಳಲ್ಲಿ ಕಟ್ಟೆಚ್ಚರ, ವಹಿವಾಟು ಬಂದ್

ಚಳ್ಳಕೆರೆ: ತಾಲೂಕಿನ ಆಂಧ್ರ ಪ್ರದೇಶದ ಗಡಿ ಗ್ರಾಮಗಳ ರಸ್ತೆಗಳೆಲ್ಲವನ್ನೂ ಬಂದ್ ಮಾಡಿದ್ದರಿಂದ ದೈನಂದಿನ ವ್ಯಾಪಾರ ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ.

ಚಳ್ಳಕೆರೆ ತಾಲೂಕಿನ ಜನ ಆಂಧ್ರದವರೊಂದಿಗೆ, ಇಲ್ಲಿನವರ ಚಳ್ಳಕೆರೆ ನಾಗರಿಕರೊಂದಿಗೆ ವ್ಯವಹಾರಿ ಸಂಬಂಧ ಹೊಂದಿದ್ದರು. ಲಾಕ್‌ಡೌನ್ ಕಾರಣ ಗಡಿ ಗ್ರಾಮಗಳ ರಸ್ತೆಗಳಲ್ಲಿ ಆಳುದ್ದದ ಗುಂಡಿ ತೋಡಿ ಸಂಚಾರ ಬಂದ್ ಮಾಡಿದ್ದರಿಂದ ದೈನಂದಿನ ವ್ಯಾಪಾರ, ವ್ಯವಹಾರ ಕಷ್ಟವಾಗಿದೆ. ಮುಖ್ಯವಾಗಿ ಆಂಧ್ರ ಪ್ರದೇಶದ ಕಲ್ಯಾಣದುರ್ಗ ತಾಲೂಕಿನಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚಿರುವ ಕಾರಣ ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಆಂಧ್ರ-ಕರ್ನಾಟಕದ ಹಳ್ಳಿಗಳಿಗೆ ಸಂಪರ್ಕ ಸೇತುವೆಯಾಗಿದ್ದ ಕೊರ‌್ಲಕುಂಟೆ ಸಮೀಪದ ಬಂಡೆ ಮಾರಮ್ಮನ ದೇವಸ್ಥಾನ ಹತ್ತಿರ ಮತ್ತು ಸಿರಿಮಜ್ಜನಹಳ್ಳಿ ಬಳಿಯ ರಸ್ತೆಗಳನ್ನು ಅಗೆದು ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.

ಇನ್ನೂ ಈ ಭಾಗದ ಪಾತಪ್ಪನ ಗುಡಿ, ನಾಗಪ್ಪನಹಳ್ಳಿ ಗೇಟ್, ಪುಠ್ಲರಹಳ್ಳಿ ಗೇಟ್, ಅಮರಪುರ ಮಾರ್ಗದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ನೆರೆ ರಾಜ್ಯದಿಂದ ಬರುವ ಜನ ಮತ್ತು ವಾಹನಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.