ಚಳ್ಳಕೆರೆ: ಬಸವಣ್ಣನವರ ಪುಣ್ಯ ಕಾರ್ಯಗಳ ಮಾದರಿಯಲ್ಲಿ ಹಸಿದವರಿಗೆ ಅನ್ನ ಮತ್ತು ಬಾಯಾರಿದವರಿಗೆ ನೀರು ಕೊಡುವ ಮಾನವೀಯ ಕಾಯಕದ ಮೂಲಕ ಸಮಾಜದಲ್ಲಿ ಸಂತ ಸೇವಾಲಾಲ್ ಮಾದರಿಯಾಗಿ ಉಳಿದುಕೊಂಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸೇವಾಲಾಲ್ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
12ನೇ ಶತಮಾನದ ಸಮಾಜ ಸುಧಾರಕರ ಸೇವಾ ಕಾರ್ಯಗಳಂತೆ ಜೀವಿಸಿದ ಕಡಿಮೆ ಅವಧಿಯಲ್ಲಿ ಸಮಾಜ ಮೆಚ್ಚುವಂತ ಮಾನವೀಯ ಕಾರ್ಯ ಸೇವಾಲಾಲ್ ಮಾಡಿದ್ದಾರೆ. ಕಾಡಿನಲ್ಲಿ ಬದುಕು ನಡೆಸುತ್ತಾ ಮಾನವ ಕುಲಕ್ಕೆ ಸಮೀಪದ ಋಷಿಗಳಾಗಿದ್ದವರು. ಮನುಷ್ಯನ ಮನಶಾಂತಿ ಕದಡುವ ಹರಿಷಡ್ವರ್ಗ ಗೆಲ್ಲುವ ಮೂಲಕ ಆದರ್ಶ ಬದುಕು ರೂಪಿಸಿಕೊಳ್ಳುವ ಮಾರ್ಗವನ್ನು ತೋರಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ತಹಸೀಲ್ದಾರ್ ರೆಹನಾ ಪಾಷಾ ಮಾತನಾಡಿ, ಸೇವಾಲಾಲ್ ಕೇವಲ 34 ವರ್ಷ ಬಾಳಿದವರು. ಭಾರತದ ಧಾರ್ಮಿಕ ರಾಯಭಾರಿಯಾಗಿ ಅವರ ಕೊಡುಗೆ ಅಪಾರ. ಲೋಕಾನುಭವದಲ್ಲಿ ಬದುಕಿನ ಸಾರ್ಥಕತೆ ಕಂಡುಕೊಂಡಿದ್ದನ್ನು ತತ್ವಗಳ ರಚನೆ ಮೂಲಕ ಸಮಾಜಕ್ಕೆ ಸಾರ್ವತ್ರಿಕ ಸತ್ಯ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ನಗರಸಭಾ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಆರ್.ಮಂಜುಳಾ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಡಾ.ಚಂದ್ರನಾಯ್ಕ, ಪುರುಷೋತ್ತಮ, ಕಾಂಗ್ರೆಸ್ ಮಹಿಳಾ ಘಟಕ ತಾಲೂಕಾಧ್ಯಕ್ಷೆ ಗೀತಾಬಾಯಿ, ದೊಡ್ಡರಂಗಪ್ಪ, ವಿರುಪಾಕ್ಷಪ್ಪ, ಡಾ.ರೇವಣ್ಣ, ಜೆ.ಅಶೋಕ್, ಆರ್.ಗೋಪಾಲನಾಯ್ಕ, ಗೋವಿಂದನಾಯ್ಕ, ಕೃಷ್ಣನಾಯ್ಕ ಮತ್ತಿತರರು ಇದ್ದರು.