ಚಳ್ಳಕೆರೆ: ರಸ್ತೆ ಕಾಮಗಾರಿಗಳ ಗುಣಮಟ್ಟಕ್ಕೆ ಗುತ್ತಿಗೆದಾರರು ಆದ್ಯತೆ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ಮೀರಸಾಬಿಹಳ್ಳಿ ಗೇಟ್‌ನಿಂದ ಕರೀಕೆರೆವರೆಗೂ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 6.5 ಕಿಮೀ ದೂರದ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿ ಮಾತನಾಡಿದರು.
ತಾಲೂಕಿನ ಸಮಗ್ರ ಪ್ರಗತಿಗೆ ಕೈಗೊಂಡಿರುವ ಕಾಮಗಾರಿಗಳಲ್ಲಿ ರಸ್ತೆ ಅಭಿವೃದ್ಧಿ ಪ್ರಧಾನವಾಗಿವೆ. ಗಡಿಭಾಗದ ಬಾಲೇನಹಳ್ಳಿಯಿಂದ ಪಾವಗಡ ಮಾರ್ಗವಾಗಿ 52 ಕಿಮೀ ದೂರದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ನಗರದ ಹೊರವಲಯ ಆದರ್ಶ ಶಾಲೆಯ ಮುಂಭಾಗದಿಂದ ಚೌಳೂರು ಗೇಟ್‌ವರೆಗೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ರಿಪೇರಿ ಮತ್ತು ಮರು ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ಗುಣಮಟ್ಟದಿಂದ ಜರುಗುತ್ತಿದೆಯೆ ಎಂದು ಗ್ರಾಮಸ್ಥರು ಸದಾ ಪರಿಶೀಲಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್, ತಾಪಂ ಸದಸ್ಯ ಜಿ.ವೀರೇಶ್, ಮುಖಂಡರಾದ ಮೆಡಿಕಲ್ ಕೇಶವ, ತಿಪ್ಪೇಸ್ವಾಮಿ, ಹನುಮಂತಪ್ಪ ಇದ್ದರು.