ಚಳ್ಳಕೆರೆ: ಶಾಂತಿ, ಸಾಮರಸ್ಯ ಕದಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಉಪ ಅಧೀಕ್ಷಕ ರೋಷನ್ ಜಮೀರ್ ಎಚ್ಚರಿಕೆ ನೀಡಿದರು.
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಮರಳು ಸಾಗಣೆ, ಮಟ್ಕಾ, ಇಸ್ಪೀಟ್‌ನಂತಹ ಧಂದೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇನ್ಮುಂದೆ ಇಂತಹ ಕೃತ್ಯ ನಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗುಂಪುಗಾರಿಕೆ ಬಿಟ್ಟು ಸರ್ವರೂ ಸಹಮತದಿಂದ ಬಾಳುವೆ ನಡೆಸಬೇಕು. ಒಳ ಜಗಳ, ವೈಷಮ್ಯ ಸಾಧಿಸಿದರೆ ಊರಿನ ಶಾಂತಿ ಕದಡುತ್ತದೆ. ಅಲ್ಲದೆ ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಿದರು.
ಪೊಲೀಸ್ ಉಪ ನಿರೀಕ್ಷಕ ನೂರ್‌ಅಹಮ್ಮದ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.