ಜಿಲ್ಲೆ

ಕ್ಷಯ ಮುಕ್ತ ಜಿಲ್ಲೆಗೆ ಜಿಲ್ಲಾಧಿಕಾರಿ ತಾಕೀತು

Chitradurga

ಚಿತ್ರದುರ್ಗ: ಜಿಲ್ಲೆಯಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ನಿಯಂತ್ರಣಗೊಳಿಸುವ ಮೂಲಕ ಚಿತ್ರದುರ್ಗವನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆರೋಗ್ಯಾಧಿಕಾರಿಗಳಿಗೆ ತಾಕೀತು ಮಾಡಿದರು. ಡಿಸಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಕ್ಷಯರೋಗ ವೇದಿಕೆ ಸಭೆಯಲ್ಲಿ ಮಾತನಾಡಿ,ಚಳ್ಳಕೆರೆ ತಾಲೂಕಿನಲ್ಲಿ ಕ್ಷಯರೋಗ ಪ್ರಕರಣಗಳು ಹೆಚ್ಚಿದ್ದು,ರೋಗಿಗಳ ಸಂಖ್ಯೆ ಕಡಿತಗೊಳಿಸ ಬೇಕೆಂದರು.

ಚಳ್ಳಕೆರೆ ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ ಮಾತನಾಡಿ,ತಾಲೂಕು ವ್ಯಾಪ್ತಿಯಲ್ಲಿ ಸಾಮಾಜಿಕ,ಆರ್ಥಿಕ ಹಾಗೂ ಶೈಕ್ಷಣಿಕ ವಾಗಿ ಹಿಂದುಳಿದವರ ಸಂಖ್ಯೆ ಅಧಿಕವಿದೆ. ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕ್ಷಯರೋಗ ನಿರ್ಮೂಲನೆ ಮಾಡಬೇಕಿದೆ ಎಂದರು.

ಇದಕ್ಕಾಗಿ ಸೂಕ್ತ ಯೋಜನೆ ತಯಾರಿಸಲು ಡಿಸಿ ಅವರಿಗೆ ಸೂಚಿಸಿದರು.

ಜಿಲ್ಲೆಯ ಕ್ಷಯರೋಗಿಗಳನ್ನು ದತ್ತು ಪಡೆದು,ಅವರನ್ನು ಸಂಪೂರ್ಣವಾಗಿ ಗುಣಪಡಿಸುವ ದಾನಿಗಳಿಗೆ ಮೆಚ್ಚುಗೆ ಪತ್ರ ನೀಡು ವಂತೆಯೂ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಬ್ಲ್ಯೂ ಎಚ್‌ಒ ಪ್ರತಿನಿಧಿ ಡಾ.ಹಂಸ,ನಿಕ್ಷಯ್ ಸಾಫ್ಟ್‌ವೇರ್‌ನಲ್ಲಿ ಯಾವ ತಾಲೂಕಿನಲ್ಲಿ ಯಾವ ಕ್ಷಯರೋಗಿಯನ್ನು ದತ್ತು ಪಡೆಯಲಾಗಿದೆ ಎಂಬ ಮಾಹಿತಿ ದೊರೆಯಲಿದೆ. ಕ್ಷಯರೋಗಿ ಸಂಪೂರ್ಣ ಗುಣಮುಖರಾದ ನಂತರ ಪ್ರಶಂಸೆ ಪತ್ರ ನೀಡಲಾಗುವುದು ಎಂದರು.

ಡಿಎಚ್‌ಒ ಡಾ.ಆರ್.ರಂಗನಾಥ್ ಮಾತನಾಡಿ,ಕ್ಷಯಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಲಾಗಿದೆ. ರೋಗ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿರುವ ಚಿತ್ರದುರ್ಗ ತಾಲೂಕು ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಹಾಗೂ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂ ಕುಗಳು ವ್ಯಾಪ್ತಿಯಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು.

ರಾಷ್ಟ್ರೀಯ ಕ್ಷಯರೋಗ ನಿವಾರಣೆ ಕಾರ್ಯಕ್ರಮ ಆರೋಗ್ಯ ಸಿಬ್ಬಂದಿ ತಮ್ಮ ಹೆಸರಲ್ಲಿ ಒಬ್ಬ ರೋಗಿಯನ್ನು ದತ್ತು ಪಡೆಯಬೇಕು. ಸರ್ಕಾರೇತರ ಸಂಘಸಂಸ್ಥೆಗಳು,ದಾನಿಗಳು ದತ್ತು ಪಡೆಯಲು ಮುಂದಾದರೆ ಅವರ ಹೆಸರನ್ನು ನಿಕ್ಷಯ್‌ಮಿತ್ರ ಪೋರ್ಟಲ್‌ನಲ್ಲಿ ನೋಂ ದಾಯಿಸಿ ವರದಿ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಡಿಎಚ್‌ಒ ತಿಳಿಸಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಸಿ.ಒ.ಸುಧಾ,ಆರ್‌ಸಿಎಚ್ ಅಧಿಕಾರಿ ಡಾ.ಕುಮಾರಸ್ವಾಮಿ,ಬಸವೇಶ್ವರ ಆಸ್ಪತ್ರೆಯ ಶ್ವಾಸಕೋಶ ತಜ್ಞ ಬಸವರಾಜ್ ಸಂಗೊಳ್ಳಿ ಮತ್ತಿತರರು ಇದ್ದರು.