ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಜಿಲ್ಲೆಯಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿರುವ ನಗರವೆಂಬ ಖ್ಯಾತಿಗೆ ಚಳ್ಳಕೆರೆ ಒಳಪಟ್ಟಿದೆ. ನಗರದಲ್ಲಿನ ಸ್ವಾಗತಿಸುವ ವಿಶಾಲ ರಸ್ತೆಗಳು ಅಭಿವೃದ್ಧಿ ಸಂಕೇತವಾಗಿದೆ.
ಅನ್ಯ ಜಿಲ್ಲೆ, ತಾಲೂಕಿನವರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಚಳ್ಳಕೆರೆಯಲ್ಲಿನ ಸುಂದರ ರಸ್ತೆಗಳು ಕಣ್ಣು ಕುಕ್ಕುತ್ತವೆ.
ಆದರೆ, ಕೆಲ ವಾರ್ಡ್‌ಗಳಿಗೆ ಪ್ರವೇಶಿಸಿದರೆ ಮೂಗು ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿರುವುದು ದುರ್ದೈವ. ನಗರದ 31 ವಾರ್ಡ್‌ಗಳಲ್ಲಿ ಸಮರ್ಪಕ ಸ್ವಚ್ಛತೆ ಕಾರ್ಯ ಕಣ್ಮರೆ ಆಗಿದೆ.
ನಗರ ವ್ಯಾಪ್ತಿಯ ರಾಜಕಾಲುವೆಗಳು, ಚರಂಡಿ ಮತ್ತು ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿದ್ದ ಜಾಲಿ ಗಿಡಗಳ ಸ್ವಚ್ಛತೆಗೆ ಖಾಸಗಿಯಾಗಿ 10 ಜೆಸಿಬಿಗಳ ಸೇವೆ ಸಹಕಾರ ನೀಡಿದ್ದರೂ, ನಿರೀಕ್ಷಿತ ಸ್ವಚ್ಛತಾ ಕಾರ್ಯ ನಡೆದಿಲ್ಲ.
ಇತ್ತೀಚೆಗೆ ಈ ಸಂಬಂಧ ಸ್ವತಃ ಶಾಸಕ ಟಿ.ರಘುಮೂರ್ತಿ ಅವರು ಪೌರಾಯುಕ್ತ ಪಾಲಯ್ಯ, ಸಿಬ್ಬಂದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದೂ ಸಾಕ್ಷಿ ಇದೆ.
ಪಾವಗಡ ರಸ್ತೆಯ ರೈಲ್ವೆ ಸ್ಟೇಷನ್ ಸಮೀಪ ನೀರು ಪಾಚಿಕಟ್ಟಿ ದುರ್ವಾಸನೆಯಿಂದ ಕೂಡಿದೆ. ರಹೀಂ ನಗರ ಸಮೀಪ ಹರಿಯುತ್ತಿರುವ ದೊಡ್ಡಹಳ್ಳವು ಹಂದಿ, ಸೊಳ್ಳೆಗಳ ತಾಣವಾಗಿದೆ. ಇನ್ನು ಗಾಂಧಿನಗರ ಕೊಳೆಚೆ ಪ್ರದೇಶಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.
80 ಸಾವಿರ ಜನಸಂಖ್ಯೆಯ ನಗರ ಸ್ವಚ್ಛತಾ ಕಾರ್ಯಕ್ಕೆ ಕನಿಷ್ಟ 1 ಸಾವಿರ ಪೌರಕಾರ್ಮಿಕರ ಅಗತ್ಯವಿದೆ. ಆದರೆ, ಕೇವಲ 22 ಖಾಯಂ ಪೌರಕಾರ್ಮಿಕರು, ಹೊರಗುತ್ತಿಗೆಯಲ್ಲಿ 24 ಕಾರ್ಮಿಕರು ಶ್ರಮಿಸುತ್ತಿದ್ದಾರೆ.
ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿರುವ ನಗರದಲ್ಲಿ ಸ್ವಚ್ಛತೆ ನಿಯಂತ್ರಣವಾಗುತ್ತಿಲ್ಲ. ಇದು ಹೀಗೆ ಮುಂದುವರಿದರೆ ಸಾಂಕ್ರಾಮಿಕ ರೋಗ ಹರಡುವ ಭೀತಿ ನಾಗರಿಕರಲ್ಲಿ ಮೂಡಿದೆ.
ನಗರಸಭೆ ಮಾಜಿ ಉಪಾಧ್ಯಕ್ಷ
ಟಿ. ವಿಜಯಕುಮಾರ್
ಕೋವಿಡ್-19 ಹೆಸರಿನಲ್ಲಿ ಸೇವಾ ಭದ್ರತೆ ನೀಡದೆ ನಗರ ಸ್ವಚ್ಛತಾ ಕಾರ್ಯಕ್ಕೆ 23 ಜನರನ್ನು ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಂಡು ಬಿಡಿಸಲಾಗಿದೆ. ಆಕ್ಷನ್ ಪ್ಲಾನ್ ಮೂಲಕ ಜಿಲ್ಲಾಧಿಕಾರಿಯಿಂದ ಡಿಪಿಆರ್ ಅನುಮೋದನೆ ಪಡೆಯದೆ ಶಾಸಕರ ಒತ್ತಡಕ್ಕೆ ಸ್ವಚ್ಛತೆಗೆ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಒಂದು ಸಾವಿರ ಜನಸಂಖ್ಯೆಗೆ ಒಬ್ಬರಂತೆ 84 ಜನ ಪೌರಕಾರ್ಮಿಕರ ಸೇವೆ ಅಗತ್ಯವಿದೆ. ಕೇವಲ 46 ಜನ ಹೆಚ್ಚುವರಿಯಾಗಿ ಸ್ವಚ್ಛತೆ ಕೆಲಸ ಮಾಡಲಾಗುತ್ತಿದೆ. ಕರೊನಾ ವೇಳೆ ಬಳಸಿಕೊಂಡಿರುವ 23 ಜನರನ್ನೂ ಪೌರಕಾರ್ಮಿಕರಾಗಿ ಮುಂದುವರಿಸಬೇಕು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಆರ್.ಪ್ರಸನ್ನಕುಮಾರ್
ನಗರದಲ್ಲಿ 400 ಬೀದಿಬದಿ ಆಹಾರ ಮಾರಾಟದ ಅಂಗಡಿಗಳಿವೆ. ಸ್ವಚ್ಛತೆ ಕಾಪಾಡಿಕೊಳ್ಳಲು ಕಸ ಸಂಗ್ರಹ ತೊಟ್ಟಿಗಳು ಇಡುವ ವ್ಯವಸ್ಥೆಯಾಗಬೇಕು. ನಗರಸಭೆಯಲ್ಲಿ ಕಸ ಸಂಗ್ರಹಿಸುವ 8 ವಾಹನಗಳು ಶಿಥಿಲಾವಸ್ಥೆ ತಲುಪಿವೆ. ಅಧಿಕಾರಿಗಳು ಹೊಸ ವಾಹನಗಳ ಖರೀದಿಗೆ ಮುಂದಾಗುತ್ತಿಲ್ಲ. ಕಳೆದ ತಿಂಗಳು ಮಾತ್ರ ಪೆನಾಯಿಲ್, ಬ್ಲೀಚಿಂಗ್ ಪೌಡರ್ ಸ್ವಚ್ಛತೆಗೆ ಬಳಸಲಾಗಿತ್ತು. ಈಗ ಸ್ಥಗಿತ ಮಾಡಲಾಗಿದೆ.
ನಗರದ ಪ್ರತಿ ವಾರ್ಡ್‌ಗಳಲ್ಲೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚರಂಡಿ, ರಸ್ತೆ ಸ್ವಚ್ಛತೆ ಬಳಿಕ ಸೋಡಿಯಂ ಕ್ಲೋರೈಡ್, ಬ್ಲೀಚಿಂಗ್ ಪೌಡರ್, ಮೆಲಾಥಿಯನ್ ಪೌಡರ್ ಬಳಸಲಾಗುತ್ತಿದೆ. ಪೌರಕಾರ್ಮಿಕರ ಕೊರತೆಯಿಂದ ಕರೊನಾ ಸ್ವಚ್ಛತಾ ವೇಳೆ ಶಾಸಕರ ನಿರ್ದೇಶನದಂತೆ ದಿನಗೂಲಿಯಂತೆ ಬಳಸಿಕೊಂಡಿದ್ದ 23 ಜನರಿಗೆ ಬಟವಾಡಿ ಮಾಡಿ ಕಳುಹಿಸಲಾಗಿದೆ.
ಪಾಲಯ್ಯ
ಪೌರಾಯುಕ್ತ, ನಗರಸಭೆ